ʼಗೋಲಿ ಮಾರೋ ಸಾಲೋಂಕೊʼ ಘೋಷಣೆ ಕೂಗಿದ ಬಿಜೆಪಿ ನಾಯಕರನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿ ರಾಜೀನಾಮೆ!
ಡಿಸೆಂಬರ್ ನಲ್ಲಿ ಐಜಿಪಿಯಾಗಿ ಬಡ್ತಿ ಪಡೆದಿದ್ದ ಅಧಿಕಾರಿ ಹುಮಾಯೂನ್ ಕಬೀರ್

ಹೊಸದಿಲ್ಲಿ,ಜ.29: ನಾಟಕೀಯ ಬೆಳವಣಿಗೆಯೊಂದರಲ್ಲಿ, ಚಂದನಗರ ಪೊಲೀಸ್ ಆಯುಕ್ತ ಹುಮಾಯೂನ್ ಕಬೀರ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವರನ್ನು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಹುದ್ದೆಗೆ ಬಡ್ತಿ ಹೊಂದಿದ್ದರು.
ಕಳೆದ ವಾರ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹಾಗೂ ಹೂಗ್ಲಿ ಸಂಸದ ಲಾಕೆಟ್ ಚಟರ್ಜಿ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ 'ಗೋಲಿ ಮಾರೋ ಸಾಲೋನ್ ಕೋ' ಎಂದು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದ ಬಿಜೆಪಿ ಕಾರ್ಯಕರ್ತರನ್ನು ಕಬೀರ್ ಬಂಧಿಸಿದ್ದರು. ಇದರಲ್ಲಿ ಸ್ಥಳೀಯ ಬಿಜೆಪಿ ನಾಯಕ ಸುರೇಶ್ ಶಾ ಎಂಬಾತನೂ ಇದ್ದ ಎನ್ನಲಾಗಿದೆ.
"ಈ ಕುರಿತು ಮೂವರನ್ನು ಬಂಧಿಸಲಾಗಿದೆ. ಕೆಲವು ಘೋಷಣೆಗಳನ್ನು ಕೂಗಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಹುಮಾಯೂನ್ ಕಬೀರ್ ಹಿಂದೂಸ್ತಾನ್ ಟೈಮ್ಸ್ ಗೆ ಹೇಳಿಕೆ ನೀಡಿದ್ದರು. ತೃಣಮೂಲಕ ಕಾಂಗ್ರೆಸ್ ನ ರ್ಯಾಲಿಯ ಸಂದರ್ಭದಲ್ಲೂ ಇಂತಹಾ ಹಲವು ಹೇಳಿಕೆ ಮತ್ತು ಘೋಷಣೆಗಳನ್ನು ಕೂಗಿದ್ದರು. ಅವರನ್ನೇಕೆ ಬಂಧಿಸಲಿಲ್ಲ ಎಂದು ಬಿಜೆಪಿ ಪ್ರಶ್ನಿಸಿದೆ.
ಸದ್ಯ ವೈಯಕ್ತಿಕ ಕಾರಣಗಳನ್ನು ನೀಡಿ ಹುಮಾಯೂನ್ ಕಬೀರ್ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರ ರಾಜೀನಾಮೆಯ ಹಿಂದಿನ ಪ್ರಮುಖ ಕಾರಣದ ಕುರಿತು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಪ್ರಸ್ತುತ ಕೋಲ್ಕತಾ ಪೊಲೀಸ್ ಜಂಟಿ ಆಯುಕ್ತರಾಗಿ ಗೌರವ್ ಶರ್ಮಾ ಅವರನ್ನು ಹೂಗ್ಲಿ ಜಿಲ್ಲೆಯ ಚಂದನಗರದ ಹೊಸ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ತಿಳಿಸಿದೆ. ಫೆಬ್ರವರಿ 1 ರಂದು ಶರ್ಮಾ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ಹುಮಾಯೂನ್ ಕಬೀರ್ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು ಮಾತ್ರವಲ್ಲದೇ, ಕ್ರೈಮ್ ಥ್ರಿಲ್ಲರ್ ʼಅಲೇಯಾʼ ಎಂಬ ಬೆಂಗಾಳಿ ಭಾಷೆಯ ಸಿನಿಮಾವನ್ನೂ ನಿರ್ದೇಶಿಸಿದ್ದರು.







