‘ಜಿಐ ಟ್ಯಾಗ್' ಹೊಂದಿದ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ: ಸಚಿವ ಜಗದೀಶ್ ಶೆಟ್ಟರ್

ಬೆಂಗಳೂರು, ಜ. 29: ‘ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್'(ಜಿಐ ಟ್ಯಾಗ್) ಹೊಂದಿದ ಚನ್ನಪಟ್ಟಣದ ಬೊಂಬೆಗಳು, ಕೊಲ್ಲಾಪುರ ಚಪ್ಪಲಿ, ಉಡುಪಿಯ ಮಲ್ಲಿಗೆ, ಮಟ್ಟುಗುಳ್ಳ ಬದನೆಕಾಯಿ, ಸೀರೆಗಳು, ಸಂಡೂರು ಲಂಬಾಣಿ ಎಂಬ್ರಾಯಿಡರಿ ಸೇರಿದಂತೆ ರಾಜ್ಯದ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದಲ್ಲಿ ಪ್ರದರ್ಶನ ಮಳಿಗೆ ಪ್ರಾರಂಭಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಬ್ಬಯ್ಯ ಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಜಿಐ ಟ್ಯಾಗ್ ಹೊಂದಿರುವ ರಾಜ್ಯದ ಎಲ್ಲ 42 ಉತ್ಪನ್ನಗಳನ್ನು ಮಾರಾಟಕ್ಕೆ ಉತ್ತೇಜಿಸಲು ಬಸ್ ಮತ್ತು ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಳಿಗೆ ಆರಂಭಿಸಲಾಗುವುದು ಎಂದರು.
ಹೀಗೆ ಮಳಿಗೆಗಳನ್ನು ತೆರೆಯುವುದರಿಂದ ನಮ್ಮ ರಾಜ್ಯದ ಉತ್ಪನ್ನಗಳನ್ನು ಅಂತರ್‍ರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಯಾಣಿಕರಿಗೆ ಪರಿಚಯಿಸಲು ಅನುಕೂಲವಾಗುತ್ತದೆ. ಇದರಿಂದ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ ಎಂದ ಅವರು, ಬೀದರಿನ ಉತ್ಪನ್ನಗಳು, ಕಮಲಾಪುರ್ ಕೆಂಪು ಬಾಳೆಹಣ್ಣು, ಮೈಸೂರು ಅಗರಬತ್ತಿ, ಮೈಸೂರು ಸ್ಯಾಂಡಲ್, ಮೈಸೂರು ರೋಸ್‍ವುಡ್, ಮೈಸೂರಿನ ಸಂಪ್ರದಾಯಿಕ ಪೇಂಟಿಂಗ್ ಸೇರಿದಂತೆ ಮತ್ತಿತರ ಉತ್ಪನ್ನಗಳನ್ನು ಮಾರುಕಟ್ಟೆ ಕಲ್ಪಿಸಲು ಸರಕಾರ ಕ್ರಮ ವಹಿಸಲಿದೆ ಎಂದರು.
ಜವಳಿ ಇಲಾಖೆ ಮೂಲಕ ಇಳಕಲ್ ಸೀರೆ, ಗುಳೇದಗುಡ್ಡ ಕಣ, ಮೊಳಕಾಲ್ಮೂರು ಸೀರೆ ಸೇರಿದಂತೆ ಮತ್ತಿತರ ಉತ್ಪನ್ನಗಳಿಗೆ ಜಿಐ ಟ್ಯಾಗ್ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಅಧ್ಯಯನ ಕೈಗೊಳ್ಳಲಾಗಿದೆ. ಇ-ಕಾಮರ್ಸ್ ಮೂಲಕ ಮಾರುಕಟ್ಟೆ ಒದಗಿಸಲು ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್ ಸಹಯೋಗದೊಂದಿಗೆ ಉತ್ತೇಜನ ನೀಡಲಾಗುತ್ತದೆ. ಕೇಂದ್ರ ಸರಕಾರ 1993ರ ಕಾನೂನಿನ ಪ್ರಕಾರ 370 ಉತ್ಪನ್ನಗಳನ್ನು ಜಿಐ ಟ್ಯಾಕ್ ಎಂದು ಗುರುತಿಸಿದೆ. ವಿಶೇಷವೆಂದರೆ ದೇಶದಲ್ಲೇ ಅತಿಹೆಚ್ಚು ರಾಜ್ಯದ 42 ಉತ್ಪನ್ನಗಳಿಗೆ ಜಿಐ ಟ್ಯಾಗ್ ಸಿಕ್ಕಿದೆ ಎಂದು ಹೇಳಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಅಬ್ಬಯ್ಯ ಪ್ರಸಾದ್, ಜಿಐ ಟ್ಯಾಗ್ ದೊರೆತಿರುವ ಮೇಲ್ಕಂಡ ಪ್ರತಿಷ್ಠಿತ ಉತ್ಪನ್ನಗಳಿಗೆ ರಫ್ತು ಮಾಡುವ ವಿಫುಲ ಅವಕಾಶಗಳಿವೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಪ್ರಚಾರ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಉತ್ಪಾದಕರಿಗೆ ನೆರವು ನೀಡಬೇಕು ಎಂದು ಕೋರಿದರು.







