"ತ್ರಿವರ್ಣ ಧ್ವಜವನ್ನು ಗೌರವಿಸುವ ಕುರಿತು ಬಿಜೆಪಿಗರು ಹೇಳಿಕೊಡಬೇಕಿಲ್ಲ, ಬಹುತೇಕ ರೈತರ ಮಕ್ಕಳು ಸೇನೆಯಲ್ಲಿದ್ದಾರೆ"
ರೈತ ನಾಯಕ ಯೋಗೇಂದ್ರ ಯಾದವ್ ಹೇಳಿಕೆ

ಹೊಸದಿಲ್ಲಿ,ಜ.29: ಕೆಂಪುಕೋಟೆಯ ಮುಂಭಾಗದಲ್ಲಿರುವ ಧ್ವಜಸ್ಥಂಭದಲ್ಲಿ ನಿಶಾನ್ ಸಾಹಿಬ್ ಧ್ವಜವನ್ನು ಹಾರಿಸಿದ ಕುರಿತು ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ಕೆಂಪುಕೋಟೆಯ ಮೇಲೆ ಇದ್ದ ಭಾರತದ ಧ್ವಜವನ್ನು ಕಿತ್ತೆಸೆದು ಈ ಧ್ವಜವನ್ನು ಹಾರಿಸಿದ್ದರು ಎಂಬ ಸುಳ್ಳುಸುದ್ದಿಯೂ ವ್ಯಾಪಕವಾಗಿ ಹರಡಿತ್ತು. ಈ ಕುರಿತಾದಂತೆ ಹಲವಾರು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರು.
ಇದೀಗ ಈ ಕುರಿತು ಮಾತನಾಡಿದ ರೈತ ನಾಯಕ ಯೋಗೇಂದ್ರ ಯಾದವ್, "ರಾಷ್ಟ್ರಧ್ವಜವನ್ನು ಯಾವ ರೀತಿ ಗೌರವಿಸಬೇಕೆಂದು ನಮಗೆ ಬಿಜೆಪಿಗರು ಹೇಳಿಕೊಡಬೇಕಾಗಿಲ್ಲ, ಅದರ ಅಗತ್ಯವೂ ನಮಗಿಲ್ಲ. ಏಕೆಂದರೆ, ಇಲ್ಲಿ ಪ್ರತಿಭಟನನಿರತರಾಗಿರುವ ಬಹುತೇಕ ರೈತರ ಮಕ್ಕಳು ಗಡಿಯಲ್ಲಿ ಸೈನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದಾಗಿ timesofindia.com ವರದಿ ಮಾಡಿದೆ.
ಜನವರಿ 30ರಂದು ರೈತರು ಸದ್ಭಾವನಾ ದಿನವನ್ನು ಆಚರಿಸುತ್ತಿದ್ದು, ಬೆಳಗ್ಗೆ ೯ ಗಂಟೆಯಿಂದ ಸಂಜೆ 5ರವರೆಗೆ ದೇಶವ್ಯಾಪಿ ಉಪವಾಸ ಕೈಗೊಳ್ಳಬೇಕೆಂದು ಕಿಸಾನ್ ಮೋರ್ಚಾ ನಾಯಕರು ಕರೆ ನೀಡಿದ್ದಾರೆ. ದೇಶದಾದ್ಯಂತ ಪ್ರತಿಯೊಬ್ಬರೂ ಉಪವಾಸ ಕೈಗೊಳ್ಳಬೇಕೆಂದು ಅಮರ್ಜೀತ್ ಸಿಂಗ್ ಹೇಳಿಕೆ ನೀಡಿದ್ದಾರೆ





