ಬಂಡವಾಳ ಆಕರ್ಷಿಸಲು ಕೇರಳ, ತಮಿಳುನಾಡಿನಲ್ಲಿ ರೋಡ್ ಶೋ: ಸಚಿವ ಜಗದೀಶ್ ಶೆಟ್ಟರ್

ಬೆಂಗಳೂರು, ಜ. 29: ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಯಾವುದೇ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ಬಂಡವಾಳ ಹೂಡಿಕೆಗೆ ಮುಂದೆ ಬರುವ ಉದ್ಯಮಿಗಳಿಗೆ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಲಿಂಗೇಶ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಎರಡು ಮತ್ತು ಮೂರನೆ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ವಿಶೇಷ ಆಸ್ಥೆ ವಹಿಸಿದೆ. ಹಾಸನ ಜಿಲ್ಲೆ ಬೇಲೂರಿನ ವ್ಯಾಪ್ತಿಯಲ್ಲಿರುವ ಎಂ.ಹುಣಸೆಕೆರೆ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆ ವಶದಲ್ಲಿರುವ ಭೂಮಿಯನ್ನು ಕೈಗಾರಿಕೆ ಇಲಾಖೆ ವಶಕ್ಕೆ ಪಡೆದು ಕೈಗಾರಿಕೆ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.
ರೋಡ್ ಶೋ ಮೂಲಕ ಪ್ರಚಾರ: ರಾಜ್ಯ ಸರಕಾರದ ನೂತನ ಕೈಗಾರಿಕಾ ನೀತಿಯ ಕುರಿತು ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಶೀಘ್ರದಲ್ಲೇ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ರೋಡ್ ಶೋ ಮಾಡಿ ಹೆಚ್ಚು ಪ್ರಚಾರ ಮಾಡಲಾಗುವುದು ಎಂದು ಜಗದೀಶ್ ಶೆಟ್ಟರ್ ಇದೇ ವೇಳೆ ತಿಳಿಸಿದರು.
ನೂತನ ಕೈಗಾರಿಕಾ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ 5ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷಿಸಿದ್ದು, 20ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶವಿದೆ. 2025ರವರೆಗೂ ಈ ನೀತಿ ಜಾರಿಯಲ್ಲಿರುತ್ತದೆ. ಕೈಗಾರಿಕಾ ನೀತಿಯಲ್ಲಿ ವಲಯವಾರು ವಿಂಗಡಣೆ ಮಾಡಲಾಗಿದ್ದು, ಹಿಂದುಳಿದ ತಾಲೂಕುಗಳು ಆದ್ಯತೆ ನೀಡಲಾಗುವುದು ಎಂದರು.







