ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸಲು ದಕ್ಷಿಣ ಆಫ್ರಿಕ ಸೇನೆ ಅನುಮತಿ
ಪ್ರಕರಣ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ್ದ ಮೇಜರ್ ಪಾತಿಮಾ ಇಸಾಕ್ಸ್

ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಜ. 29: ಸಮವಸ್ತ್ರದ ಭಾಗವಾಗಿ ಶಿರವಸ್ತ್ರ (ಹಿಜಾಬ್)ಗಳನ್ನು ಧರಿಸಲು ಮುಸ್ಲಿಮ್ ಮಹಿಳೆಯರಿಗೆ ಸಾಧ್ಯವಾಗುವಂತೆ, ದಕ್ಷಿಣ ಆಫ್ರಿಕದ ಸೇನೆಯು ತನ್ನ ವಸ್ತ್ರ ನೀತಿಗೆ ತಿದ್ದುಪಡಿ ಮಾಡಿದೆ ಎಂದು ಸೇನೆಯ ವಕ್ತಾರ ಮಫಿ ಮಗೊಬೊಝಿ ಗುರುವಾರ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
2018ರ ಜೂನ್‌ನಲ್ಲಿ, ತನ್ನ ಸೇನಾ ಟೊಪ್ಪಿಯ ಕೆಳಗೆ ಹಿಜಾಬ್ ಧರಿಸಿರುವುದಕ್ಕಾಗಿ ಮೇಜರ್ ಫಾತಿಮಾ ಇಸಾಕ್ಸ್ ವಿರುದ್ಧ ಸೇನೆಯು ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು. ಸಮವಸ್ತ್ರದಲ್ಲಿರುವಾಗ ಹಿಜಾಬ್ ತೆಗೆಯುವಂತೆ ಮೇಲಧಿಕಾರಿ ನೀಡಿದ್ದ ಆದೇಶವನ್ನು ಪಾಲಿಸಲು ಅವರು ನಿರಾಕರಿಸಿದ್ದರು. ಅದಕ್ಕಾಗಿ, ಮೇಲಧಿಕಾರಿಯ ಕಾನೂನುಬದ್ಧ ಸೂಚನೆಗಳನ್ನು ಪಾಲಿಸಲು ನಿರಾಕರಿಸುವ ಮೂಲಕ ಉದ್ದೇಶಪೂರ್ವಕ ಅವಿಧೇಯತೆ ತೋರಿಸಿದ್ದಾರೆ ಎಂಬ ಆರೋಪವನ್ನು ಫಾತಿಮಾ ವಿರುದ್ಧ ಹೊರಿಸಲಾಗಿತ್ತು.
ಆದರೆ, ಕಳೆದ ವರ್ಷದ ಜನವರಿಯಲ್ಲಿ ಸೇನಾ ನ್ಯಾಯಾಲಯವೊಂದು ಅವರ ವಿರುದ್ಧದ ಆರೋಪಗಳನ್ನು ಕೈಬಿಟ್ಟಿತ್ತು. ಅದೂ ಅಲ್ಲದೆ, ಕರ್ತವ್ಯದಲ್ಲಿರುವಾಗ ಬಿಗಿಯಾದ ಕಪ್ಪು ತಲೆವಸ್ತ್ರವನ್ನು ಧರಿಸಲೂ ನ್ಯಾಯಾಲಯ ಫಾತಿಮಾಗೆ ಅನುಮತಿ ನೀಡಿತ್ತು.
ಆದರೆ, ಸೇನೆಯು ತನ್ನ ವಸ್ತ್ರ ನೀತಿಗೆ ತಿದ್ದುಪಡಿ ತರಲಿಲ್ಲ. ಧಾರ್ಮಿಕ ಉಡುಗೆಗಳನ್ನು ನಿರ್ಬಂಧಿಸುವ ನಿಯಮಗಳನ್ನು ಪ್ರಶ್ನಿಸಿ ಫಾತಿಮಾ, ದಕ್ಷಿಣ ಆಫ್ರಿಕದ ಸಮಾನತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು.
ಈಗ ದಕ್ಷಿಣ ಆಫ್ರಿಕ ರಕ್ಷಣಾ ಪಡೆ (ಎಸ್‌ಎಎನ್‌ಡಿಎಫ್) ತನ್ನ ವಸ್ತ್ರ ನೀತಿಗೆ ತಿದ್ದುಪಡಿ ತಂದಿದೆ ಹಾಗೂ ಮುಸ್ಲಿಮ್ ಮಹಿಳೆಯರು ಕರ್ತವ್ಯದಲ್ಲಿರುವಾಗ ತಮ್ಮ ತಲೆಗಳನ್ನು ಮುಚ್ಚಿಕೊಳ್ಳಲು ಅನುಮತಿ ನೀಡಿದೆ ಎಂದು ವಕ್ತಾರ ಮಫಿ ಮಗೊಬೊಝಿ ಹೇಳಿದರು.







