ಮುಂಬೈ: ಫೆ.1ರಿಂದ ಲೋಕಲ್ ರೈಲು ಸಂಚಾರ ಪುನರಾರಂಭ
ಮುಂಬೈ, ಜ.29: ಮುಂಬೈಯಲ್ಲಿ ಉಪನಗರ ರೈಲು ಸೇವೆಗಳನ್ನು ಫೆ.1ರಿಂದ ನಿಗದಿತ ಸಮಯದಲ್ಲಿ ಆರಂಭಿಸಲು ಮಹಾರಾಷ್ಟ್ರ ಸರಕಾರ ಅವಕಾಶ ನೀಡಿದೆ. ಈ ಕುರಿತಂತೆ ಉದ್ಧವ್ ಠಾಕ್ರೆ ಸರಕಾರ ರೈಲ್ವೇ ಮಂಡಳಿಗೆ ಪತ್ರ ಬರೆದಿದ್ದು, ಬೆಳಿಗ್ಗೆ 7 ಗಂಟೆ, ಸಂಜೆ 4 ಗಂಟೆಗೆ ಹಾಗೂ ರಾತ್ರಿ 9 ಗಂಟೆಗೆ ಲೋಕಲ್ ರೈಲು ಸಂಚಾರ ಆರಂಭಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ನಿಗದಿತ ಸಮಯ ಹೊರತುಪಡಿಸಿ, ನಡುವಿನ ಅವಧಿಯಲ್ಲಿ ಸಂಚರಿಸುವ ರೈಲುಗಳಲ್ಲಿ ಅಗತ್ಯದ ಸೇವೆಗಳಿಗೆ (ಕೊರೋನ ವಿರುದ್ಧದ ಹೋರಾಟದ ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಒಂಟಿ ಮಹಿಳಾ ಪ್ರಯಾಣಿಕರು, ಸರಕಾರದಿಂದ ವಿಶೇಷ ಪಾಸ್ ಪಡೆದವರು) ಮಾತ್ರ ಅವಕಾಶ ನೀಡುವಂತೆ ಸರಕಾರ ಸಲಹೆ ನೀಡಿದೆ. ಪತ್ರದ ಹಿನ್ನೆಲೆಯಲ್ಲಿ, ಮೇಲಧಿಕಾರಿಗಳ ಅನುಮತಿ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸೆಂಟ್ರಲ್ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ.
ಅಗತ್ಯ ಸೇವೆಗಳಿಗೆ ನೆರವಾಗಲು ಉಪನಗರ ರೈಲು ಸೇವೆಗೆ ಜ.29ರಿಂದ ಚಾಲನೆ ನೀಡುವುದಾಗಿ ಕೇಂದ್ರ ಮತ್ತು ಪಶ್ಚಿಮ ರೈಲ್ವೇ ಅಧಿಕಾರಿಗಳು ಕಳೆದ ವಾರ ಹೇಳಿದ್ದರು. ಕೊರೋನ ಸೋಂಕಿನ ಸಮಸ್ಯೆಗಿಂತ ಮೊದಲು 3,141 ಲೋಕಲ್ ರೈಲುಗಳು ಸಂಚರಿಸುತ್ತಿದ್ದವು. ಕಳೆದ ವರ್ಷದ ಮಾರ್ಚ್‌ನಲ್ಲಿ ಲೋಕಲ್ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ 95% ರೈಲುಗಳ ಸಂಚಾರ (2,985) ಪುನರಾರಂಭವಾಗಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.





