ಪರಿಷತ್ ಗೌರವ, ಘನತೆ ಕಾಪಾಡೋಣ: ನೂತನ ಉಪಸಭಾಪತಿ ಎಂ.ಕೆ.ಪ್ರಾಣೇಶ್

ಬೆಂಗಳೂರು, ಜ.29: 113 ವರ್ಷಗಳ ಸುದೀರ್ಘ ಇತಿಹಾಸ ವಿಧಾನ ಪರಿಷತ್‍ಗೆ ಇದೆ. ಹೀಗಾಗಿ, ಎಲ್ಲರೂ ಅದರ ಘನತೆ, ಗೌರವವನ್ನು ಕಾಪಾಡಿಕೊಂಡು ಮುಂದೆ ಸಾಗೋಣ ಹಾಗೂ ಹಿಂದಿನ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಆಗಿದೆ ಎಂದು ನೂತನ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್‍ನಲ್ಲಿ ಉಪಸಭಾಪತಿಯಾಗಿ ಆಯ್ಕೆಯಾದ ಬಳಿಕ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ಅಭಿನಂದನೆ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಆಡಳಿತ ಪಕ್ಷದ ಸದಸ್ಯರು ಯಾವುದೇ ವಿಷಯದ ಕುರಿತು ಸಮರ್ಥನೆ ಮಾಡಿಕೊಳ್ಳುವುದು ಪ್ರತಿಪಕ್ಷಗಳ ಸದಸ್ಯರು ವಿರೋಧ ಮಾಡುವುದು ಅನಿವಾರ್ಯ ಆಗಿರುತ್ತದೆ. ಆದರೆ, ರಾಜ್ಯದ ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಸದನ ನಡೆಯಬೇಕಾಗಿದೆ. ಆಗ ಮಾತ್ರ ಸಮಾಜ ಅಭಿನಂದಿಸುತ್ತದೆ. ಈ ನಿಟ್ಟಿನಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.
ಸಭಾಪತಿಯಾಗಿರುವ ಪ್ರತಾಪ್‍ಚಂದ್ರ ಶೆಟ್ಟಿ ಅವರಿಗೆ ಅನಿರೀಕ್ಷಿತವಾಗಿ ಹುದ್ದೆ ಒಲಿದುಬಂದಂತೆ, ತಮಗೂ ಉಪಸಭಾಪತಿ ಹುದ್ದೆ ಒಲಿದು ಬಂದಿದೆ. ಪಕ್ಷದ ನಾಯಕರು ಮತ್ತು ಸದನದ ಸದಸ್ಯರು ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ಬರದಂತೆ, ಎಲ್ಲರ ಸಲಹೆ, ಪ್ರೀತಿ, ಅಭಿನಂದನೆಯನ್ನು ಸ್ವೀಕರಿಸುತ್ತಲೇ ಪಕ್ಷಾತೀತವಾಗಿ ಕಾರ್ಯನಿರ್ವಹಣೆ ಮಾಡುವುದಾಗಿ ಅವರು ತಿಳಿಸಿದರು.
ಎಲ್.ಧರ್ಮೇಗೌಡರ ಸಾವು ನೋವಿನ ಸಂಗತಿ: ಎಂ.ಕೆ. ಪ್ರಾಣೇಶ್
ಎಲ್. ಧರ್ಮೇಗೌಡರ ಸಾವು ನೋವಿನ ಸಂಗತಿ. ತಾವು ಜಿ.ಪಂ. ಸದಸ್ಯರಾದಾಗಿನಿಂದ ತಮಗೆ ಅವರು ಮಾರ್ಗದರ್ಶಕರಾಗಿದ್ದರು. ಆಯಸ್ಸು ಮುಗಿದ ಮೇಲೆ ಸಾವನ್ನು ವರ್ಣಿಸುವುದು ನೆಪ ಮಾತ್ರ. ಈ ರೀತಿ ಆಗಬಾರದಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.






.jpg)
.jpg)
.jpg)

