ಮುಂಬೈ ಹೈಕೋರ್ಟ್ ನ್ಯಾಯಾಧೀಶೆಯ ‘ಪೋಕ್ಸೊ’ ತೀರ್ಪುಗಳ ವಿರುದ್ಧ ವ್ಯಾಪಕ ವಿವಾದ

ಮುಂಬೈ,ಜ.29: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ)ಯಡಿ ಲೈಂಗಿಕ ಆಕ್ರಮಣದ ಕುರಿತಾಗಿ ನೀಡಿದ ವ್ಯಾಖ್ಯಾನಕ್ಕಾಗಿ ವ್ಯಾಪಕ ಟೀಕೆಗೆ ಒಳಗಾಗಿರುವ ಬಾಂಬೆ ಹೈಕೋರ್ಟ್ ನ್ಯಾಯಾಧೀಶೆ ಪುಷ್ಪಾ ಗಾನೆಡಿವಾಲಾ ಅವರು ತೀರಾ ಇತ್ತೀಚೆಗೆ, ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ನಡೆದ ಅತ್ಯಾಚಾರದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದರು. ಈ ಎರಡೂ ಪ್ರಕರಣಗಳಲ್ಲಿ ಸಂತ್ರಸ್ತೆಯರು ನೀಡಿದ ಸಾಕ್ಷಿಯು, ಆರೋಪಿಗಳ ದೋಷಿತ್ವವನ್ನು ದೃಢಪಡಿಸುವಷ್ಟು ಭರವಸೆಯನ್ನು ಮೂಡಿಸಿಲ್ಲವೆಂದು ಅವರು ತೀರ್ಪಿನಲ್ಲಿ ತಿಳಿಸಿದ್ದರು.
ನ್ಯಾಯಮೂರ್ತಿ ಪುಷ್ಪಾ ಗಾನೆಡಿವಾಲಾ ಅವರು ಇತ್ತೀಚೆಗೆ 12 ವರ್ಷದ ಬಾಲಕಿಯ ಎದೆಯನ್ನು ಸ್ಪರ್ಶಿಸಿದ ಪ್ರಕರಣದ ಆರೋಪಿಯನ್ನು ದೋಷಮುಕ್ತಗೊಳಿಸಿದ್ದರು. ಆರೋಪಿಯು ಬಾಲಕಿಯ ಬರಿಮೈಯ ಸಂಪರ್ಕ ಹೊಂದದೆ ಇರುವುದರಿಂದ ಅದನ್ನು ಲೈಂಗಿಕ ಹಲ್ಲೆಯೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಆಕೆ ತೀರ್ಪಿನಲ್ಲಿ ಹೇಳಿದ್ದರು.
ಈ ತೀರ್ಪಿಗೆ ಕೆಲವೇ ದಿನಗಳ ಮೊದಲು ನ್ಯಾಯಮೂರ್ತಿ ಪುಷ್ಪಾ ಅವರು, ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ನೀಡಿದ ತೀರ್ಪಿನಲ್ಲಿ ಐದು ವರ್ಷದ ಬಾಲಕಿಯ ಕೈಗಳನ್ನು ಹಿಡಿದುಕೊಳ್ಳುವುದು ಹಾಗೂ ಪ್ಯಾಂಟ್‌ನ ಝಿಪ್ ಜಾರಿಸುವುದನ್ನು ಪೋಕ್ಸೊ ಕಾಯ್ದೆಯಡಿ ಲೈಂಗಿಕ ಆಕ್ರಮಣವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಿಸಿದ್ದರು. ಅವರ ತೀರ್ಪು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಇನ್ನೆರಡು ತೀರ್ಪುಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಅತ್ಯಾಚಾರಗೈದ ಇಬ್ಬರು ಆರೋಪಿಗಳನ್ನು ವಿಶ್ವಾಸಾರ್ಹ ಪುರಾವೆಯ ಕೊರತೆಯ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿದ್ದರು.
‘‘ ಆರೋಪಿಗಳ ದೋಷಿತ್ವವನ್ನು ದೃಢಪಡಿಸಲು ಸಂತ್ರಸ್ತೆ ನೀಡುವ ಸಾಕ್ಷ್ಯವು ಸಾಕಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದಾಗ್ಯೂ, ಆ ಸಾಕ್ಷ್ಯವು ನ್ಯಾಯಾಲಯಕ್ಕೆ ಆತ್ಮವಿಶ್ವಾಸವನ್ನು ಮೂಡಿಸುವಷ್ಟು ಸ್ಫೂರ್ತಿದಾಯಕವಾಗಿರಬೇಕು ಈ ಪ್ರಕರಣದಲ್ಲಿ ಹಾಗಾಗಿಲ್ಲ’’ ಎಂದು ಅವರು ತೀರ್ಪೊಂದರಲ್ಲಿ ತಿಳಿಸಿದ್ದರು.
ಎರಡನೆ ತೀರ್ಪಿನಲ್ಲಿ ಅವರು ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬಳೇ ನೀಡುವ ಸಾಕ್ಷ್ಯದಿಂದಲೇ ಆರೋಪಿಯ ಮೇಲೆ ಕ್ರಿಮಿನಲ್ ಅಪರಾಧದ ಹೊಣೆಗಾರಿಕೆಯನ್ನು ಹೊರಿಬಹುದಾಗಿದೆ. ಆದರೆ ಹಾಲಿ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಸಾಕ್ಷಿ ನೀಡಿರುವ ಕಳಪೆ ಗುಣಮಟ್ಟದ ಸಾಕ್ಷಿಯನ್ನು ಪರಿಗಣನೆಗೆ ತೆಗೆದುಕೊಂಡು, ಅಪೀಲುದಾರನನ್ನು 10 ವರ್ಷಗಳ ಕಾಲ ಜೈಲಿಗೆ ಕಳುಹಿಸುವುದು ಘೋರ ಅನ್ಯಾಯವಾಗುತ್ತದೆ ಎಂದು ಅವರು ಹೇಳಿದ್ದರು.
ಜನವರಿ 15ರಂದು ಪ್ರಕರಣವೊಂದಕ್ಕೆ ಸಂಬಂಧಿಸಿ ನೀಡಿ ತೀರ್ಪಿನಲ್ಲಿ ಪುಷ್ಪಾ ಅವರು ಒಬ್ಬನೇ ವ್ಯಕ್ತಿಯು ಸಂತ್ರಸ್ತೆಯನ್ನು ಯಾವುದೇ ಪ್ರತಿರೋಧವಿಲ್ಲದೆ ವಿವಸ್ತ್ರಳನ್ನಾಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು.
15 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ಕೆಳ ನ್ಯಾಯಾಲಯವು ತನಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸೂರತ್ ಕಾಸರ್‌ಕರ್ ಎಂಬಾತ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ಬಳಿಕ ಪುಷ್ಪಾ ಅವರು ಈ ತೀರ್ಪು ನೀಡಿದ್ದರು.
ಜನವರಿ 14ರಂದು ನ್ಯಾಯಮೂರ್ತಿ ಪುಷ್ಪಾ ಅವರು, 27 ವರ್ಷದ ಜೋಗೇಶ್ವರ್ ಕಾವಳೆ ಎಂಬಾತ 17 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿದ ಅಪರಾಧಕ್ಕಾಗಿ ತನಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದರು. ಆರೋಪಿಯು ಬಾಲಕಿಯನ್ನು ತನ್ನ ಸಹೋದರಿಯ ಮನೆಗೆ ಕೊಂಡೊಯ್ದು ಎರಡು ತಿಂಗಳುಗಳ ಕಾಲ ಲೈಂಗಿಕ ಸಂಪರ್ಕ ಬೆಳೆಸಿದ್ದನೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಗಾನೆಡಿವಾಲಾ ಅವರು ಅವಿವಾಹಿತ ಯುವಕ ಹಾಗೂ ಬಾಲಕಿಯನ್ನು ಕುಟುಂಬದ ಇತರ ಸದಸ್ಯರು ಜೊತೆಯಾಗಿ ಉಳಿದುಕೊಳ್ಳಲು ಯಾಕೆ ಅವಕಾಶ ನೀಡಿದರು ಎಂದು ಅಚ್ಚರಿ ವ್ಯಕ್ತಪಡಿಸಿದರು ಹಾಗೂ ಇಂತಹ ವಾತಾವರಣದಲ್ಲಿ ಖಾಸಗಿಯಾಗಿ ಲೈಂಗಿಕ ಸಂಪರ್ಕ ಬೆಳೆಸಲು ಸಂತ್ರಸ್ತೆ ಹಾಗೂ ಆರೋಪಿಗೆ ಹೇಗೆ ಸಾಧ್ಯವಾಯಿತು ಎಂದವರು ಪ್ರಶ್ನಿಸಿದ್ದರು.
2007ರಲ್ಲಿ ಗಾನೆಡಿವಾಲಾ ಅವರು ಜಿಲ್ಲಾ ನ್ಯಾಯಾಧೀಶೆಯಾಗಿ ನೇಮಕಗೊಳ್ಳುವ ಮುನ್ನ ನ್ಯಾಯವಾದಿಯಾಗಿದ್ದರು. 2019ರ ಫೆಬ್ರವರಿಯಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶೆಯಾಗಿ ಭಡ್ತಿ ಪಡೆದಿದ್ದರು. ಈ ವರ್ಷದ ಜನವರಿ 20ರಂದು ಹೈಕೋರ್ಟ್ ನ್ಯಾಯಾಧೀಶರಾಗಿ ಅವರ ನೇಮಕಾತಿಯನ್ನು ಖಾಯಂಗೊಳಿಸಲು ಸುಪ್ರೀಂಕೋರ್ಟ್‌ನ ಕೊಲೆಜಿಯಂ ಅನುಮೋದನೆ ನೀಡಿತ್ತು.







