ಕಾಶ್ಮೀರ: ಮೂವರು ಉಗ್ರರ ಹತ್ಯೆ

ಶ್ರೀನಗರ, ಜ.30: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು, ಹಿಝ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರೆನ್ನಲಾದ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಥ್ರಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯ ಕಾಕಾಪುರ ಪ್ರದೇಶದಲ್ಲಿ ಮತ್ತೊಂದು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಕನಿಷ್ಠ 2-3 ಉಗ್ರರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೊದಲ ಕಾರ್ಯಾಚರಣೆಯಲ್ಲಿ ನಯೀಬಾಗ್‌ನ ವಾರಿಸ್ ಹಸನ್, ಮೊಂಗ್ಹಾಮಾದ ಆರಿಫ್ ಬಶೀರ್ ಮತ್ತು ಅವಂತಿಪುರದ ಅತ್ಹೀಶಮುಲ್ ಹಖ್ ಹತರಾಗಿದ್ದಾರೆ. ಮೃತ ಉಗ್ರರು ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿದ್ದರು ಎನ್ನಲಾಗಿದೆ.
ಥ್ರಾಲ್ ಬಸ್ ನಿಲ್ದಾಣದ ಬಳಿ ನಡೆದ ಘಟನೆಯಲ್ಲಿ ಜನವರಿ 2ರಂದು ಬಶೀರ್, ಭದ್ರತಾ ಪಡೆ ವಾಹನಗಳ ಮೇಲೆ ಗ್ರೆನೇಡ್ ಎಸೆದಿದ್ದನೆನ್ನಲಾಗಿದೆ. ಘಟನೆಯಲ್ಲಿ ಒಬ್ಬ ಜವಾನ ಮತ್ತು ಎಂಟು ಮಂದಿ ನಾಗರಿಕರಿಗೆ ಗಾಯಗಳಾಗಿದ್ದವು. 2020ರ ಅಕ್ಟೋಬರ್ 5ರಂದು ಹಸನ್ ಇತರ ಉಗ್ರರ ಜತೆ ಸೇರಿ, ಅವಂತಿಪುರ ಪೊಲೀಸ್ ಗಸ್ತು ತಂಡದ ಮೇಲೆ ದಾಳಿ ಮಾಡಿದ್ದ ಎಂದು ಆಪಾದಿಸಲಾಗಿದೆ.





