ಕೋವಿಡ್ ಸಾವು: ಭಾರತವನ್ನು ಹಿಂದಿಕ್ಕಿದ ಈ ದೇಶಕ್ಕೆ ಮೂರನೇ ಸ್ಥಾನ

ಹೊಸದಿಲ್ಲಿ, ಜ.30: ಭಾರತದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡು ಒಂದು ವರ್ಷದ ಬಳಿಕ ಹೊಸ ಪ್ರಕರಣ ಮತ್ತು ಸಾವಿನ ಸಂಖ್ಯೆ ಇಳಿಮುಖವಾಗುತ್ತಿದ್ದು, ವಿಶ್ವದಲ್ಲೇ ಗರಿಷ್ಠ ಕೋವಿಡ್ ಸಾವು ಸಂಭವಿಸಿದ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿದ್ದ ಭಾರತ ಇದೀಗ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಸಾವಿನ ಸಂಖ್ಯೆಯಲ್ಲಿ ಭಾರತವನ್ನು ಹಿಂದಿಕ್ಕಿದ ಮೆಕ್ಸಿಕೊ ಇದೀ ಅಮೆರಿಕ ಹಾಗೂ ಬ್ರೆಝಿಲ್ ಬಳಿಕ ಮೂರನೇ ಸ್ಥಾನದಲ್ಲಿದೆ.
ಮೆಕ್ಸಿಕೋದಲ್ಲಿ ಕಳೆದ 24 ಗಂಟೆಗಳಲ್ಲಿ 1,500ಕ್ಕೂ ಹೆಚ್ಚು ಮಂದಿ ಸೋಂಕಿತರು ಮೃತಪಟ್ಟಿದ್ದು, ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1.55 ಲಕ್ಷಕ್ಕೇರಿದೆ. ಇದು ಭಾರತದಲ್ಲಿ ಸಂಭವಿಸಿದ ಸಾವಿನ ಸಂಖ್ಯೆ (1,54,194)ಗಿಂತ ಅಧಿಕ.
ಭಾರತದಲ್ಲಿ ಕಳೆದ 15 ದಿನಗಳಿಂದ ದಿನಕ್ಕೆ 200ಕ್ಕಿಂತ ಕಡಿಮೆ ಕೋವಿಡ್ ಸಾವು ಸಂಭವಿಸುತ್ತಿದೆ. ಆದರೆ ವಿಶ್ವದ ಕನಿಷ್ಠ ಎಂಟು ದೇಶಗಳಲ್ಲಿ ಇದೀಗ ದಿನದ ಕೋವಿಡ್ ಸಾವಿನ ಸಂಖ್ಯೆ 500ಕ್ಕಿಂತ ಅಧಿಕವಾಗಿದೆ. ನಾಲ್ಕು ದೇಶಗಳಲ್ಲಿ 1000ಕ್ಕೂ ಹೆಚ್ಚು ಮಂದಿ ಪ್ರತಿದಿನ ಬಲಿಯಾಗುತ್ತಿದ್ದಾರೆ. ಅಮೆರಿಕದಲ್ಲಿ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ದಿನಕ್ಕೆ ನಾಲ್ಕು ಸಾವಿರದ ಆಸುಪಾಸಿನಲ್ಲಿದೆ.
ಅಮೆರಿಕದಲ್ಲಿ ಅತ್ಯಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದು, ಗುರುವಾರದ ವರೆಗೆ ಒಟ್ಟು ಮೃತಪಟ್ಟವರ ಸಂಖ್ಯೆ 4.4 ಲಕ್ಷ ಆಗಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಝಿಲ್‌ನಲ್ಲಿ 2.2 ಲಕ್ಷ ಸಾವು ಸಂಭವಿಸಿದೆ. ಮೆಕ್ಸಿಕೊ ಮತ್ತು ಭಾರತವನ್ನು ಹೊರತುಪಡಿಸಿದರೆ ಒಂದು ಲಕ್ಷಕ್ಕಿಂತ ಹೆಚ್ಚು ಕೋವಿಡ್ ಸಾವು ಸಂಭವಿಸಿದ ಏಕೈಕ ದೇಶ ಬ್ರಿಟನ್. ಭಾರತ ಹೊರತುಪಡಿಸಿ ಉಳಿದ ನಾಲ್ಕೂ ದೇಶಗಳಲ್ಲಿ ಇದೀಗ ಪ್ರತಿದಿನ 1000ಕ್ಕೂ ಅಧಿಕ ಸಾವು ಸಂಭವಿಸುತ್ತಿದೆ.
ಕಳೆದ ವರ್ಷದ ಜನವರಿ 30ರಂದು ಚೀನಾದ ವೂಹಾನ್‌ನಿಂದ ಆಗಮಿಸಿದ್ದ ಕೇರಳ ವಿದ್ಯಾರ್ಥಿಯೊಬ್ಬನಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿತ್ತು. ಇದು ದೇಶದ ಮೊದಲ ಪ್ರಕರಣವಾಗಿತ್ತು.







