ಸಿಂಘು ಗಡಿ: ರೈತರ ಮೇಲಿನ ಗುಂಪು ದಾಳಿ ಬಳಿಕ 44 ಮಂದಿಯ ಬಂಧನ

ಹೊಸದಿಲ್ಲಿ, ಜ.30: ದೇಶದ ಗಣರಾಜ್ಯೋತ್ಸವದಂದು ರೈತರು ನಡೆಸಿದ ಟ್ರ್ಯಾಕ್ಟರ್ ಪರೇಡ್ ವೇಳೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಸಂಭವಿಸಿದ ಮೂರು ದಿನಗಳ ಬಳಿಕ ಸಿಂಘು ಗಡಿ ರಣಾಂಗಣವಾಗಿ ಮಾರ್ಪಟ್ಟಿದೆ. ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಗುಂಪೊಂದರ ನಡುವೆ ಶುಕ್ರವಾರ ಸಂಘರ್ಷ ನಡೆದಿದ್ದು, ಘಟನೆಗೆ ಸಂಬಂಧಿಸಿ 44 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯರು ಎಂದು ಹೇಳಿಕೊಂಡ ಜನರ ಗುಂಪು, ರೈತರು ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ ಎಂದು ಆಪಾದಿಸಿ, ಪ್ರತಿಭಟನಾಕಾರ ರೈತರ ಮೇಲೆ ಹಲ್ಲೆ ನಡೆಸಿತು. ಈ ವೇಳೆ ಉಭಯ ಗುಂಪುಗಳ ನಡುವೆ ಕಲ್ಲು ತೂರಾಟ, ಮಾರಾಮಾರಿ ನಡೆದು ಹಲವು ಮಂದಿ ಗಾಯಗೊಂಡಿದ್ದರು.
ಗಾಯಾಳುಗಳಲ್ಲಿ ಅಲೀಪುರ ಎಸ್‌ಎಚ್‌ಓ ಪ್ರದೀಪ್ ಪಾಲಿವಾಲ್ ಸೇರಿದ್ದು, ಪ್ರತಿಭಟನಾಕಾರರಲ್ಲಿ ಒಬ್ಬ ಖಡ್ಗ ಝಳಪಿಸಿದಾಗ ಪ್ರದೀಪ್ ತೀವ್ರವಾಗಿ ಗಾಯಗೊಂಡಿದ್ದರು. ಎಸ್‌ಎಚ್‌ಓ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ಆರೋಪದಲ್ಲಿ ನವಾನ್‌ಶಹರ್ ನಿವಾಸಿ ರಂಜೀತ್ ಸಿಂಗ್ ಎಂಬಾತ ಸೇರಿದಂತೆ 44 ಮಂದಿಯನ್ನು ಬಂಧಿಸಲಾಗಿದೆ. ಘರ್ಷಣೆ ಶಮನಗೊಳಿಸುವ ಪ್ರಯತ್ನದಲ್ಲಿದ್ದ ಇತರ ಮೂವರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ ಎಂದು ಪಶ್ಚಿಮ ವಲಯ ವಿಶೇಷ ಆಯುಕ್ತ ಸಂಜಯ್ ಸಿಂಗ್ ಹೇಳಿದ್ದಾರೆ.
ಪ್ರತಿಭಟನಾಕಾರರನ್ನು ಚದುರಿಸಲು 15 ಅಶ್ರುವಾಯು ಪ್ರಯೋಗಿಸಲಾಗಿದೆ. ಖಡ್ಗ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಶುಕ್ರವಾರ ಮಧ್ಯಾಹ್ನದ ಬಳಿಕ ಫಲಕ ಹಾಗೂ ಧ್ವಜಗಳನ್ನು ಹಿಡಿದಿದ್ದ 200ಕ್ಕೂ ಹೆಚ್ಚು ಮಂದಿಯ ಗುಂಪೊಂದು ಆಗಮಿಸಿ, ರೈತರ ಪ್ರತಿಭಟನೆಯಿಂದಾಗಿ ತಮಗೆ ಆರ್ಥಿಕ ಸಂಕಷ್ಟ ತಲೆದೋರಿದೆ. ತಕ್ಷಣ ರೈತರು ಜಾಗ ಖಾಲಿ ಮಾಡಬೇಕು ಎಂದು ಆಗ್ರಹಿಸಿದರು. ಇದು ಉಭಯ ಗುಂಪುಗಳ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಪೊಲೀಸರ ಜತೆ ಸುದೀರ್ಘ ಸಂಘರ್ಷದ ಬಳಿಕ ಈ ಗುಂಪು ಪ್ರತಿಭಟನಾ ಸ್ಥಳಕ್ಕೆ ಲಗ್ಗೆ ಇಟ್ಟಿತು ಎನ್ನಲಾಗಿದೆ. ರೈತರ ಟೆಂಟ್‌ಗಳನ್ನು ಕಿತ್ತೆಸೆದು, ರೈತರ ವಸ್ತುಗಳನ್ನು ಗುಂಪು ಹಾಳುಗೆಡವಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು.







