ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ವಿವಾದಾಸ್ಪದ ತೀರ್ಪು ನೀಡಿದ್ದ ಜಡ್ಜ್ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದೇನು?

ಹೊಸದಿಲ್ಲಿ,ಜ.30: ಬಾಂಬೆ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶೆ ನ್ಯಾ.ಪುಷ್ಪಾ ಗನೇಡಿವಾಲಾ ಅವರು ಪೋಕ್ಸೊ ಕಾಯ್ದೆಯಡಿ ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿವಾದಾತ್ಮಕ ತೀರ್ಪುಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಕಾಯಂ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಲು ನೀಡಿದ್ದ ಒಪ್ಪಿಗೆಯನ್ನು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಹಿಂದೆಗೆದುಕೊಂಡಿದೆ.
ಪೋಕ್ಸೊ ಕಾಯ್ದೆಯಡಿ ಲೈಂಗಿಕ ಹಲ್ಲೆಯ ಕುರಿತು ತನ್ನ ವ್ಯಾಖ್ಯಾನಕ್ಕಾಗಿ ನ್ಯಾ.ಗನೇಡಿವಾಲಾ ಅವರು ತೀವ್ರ ಟೀಕೆಗೆ ಗುರಿಯಾದ ಬಳಿಕ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಕೊಲಿಜಿಯಂ ಈ ನಿರ್ಧಾರವನ್ನು ಕೈಗೊಂಡಿದೆ.‘ಚರ್ಮಕ್ಕೆ ಚರ್ಮದ ಸಂಪರ್ಕವಿಲ್ಲದೆ ’ ಮೈಯನ್ನು ತಡಕಾಡಿದರೆ ಅದು ಲೈಂಗಿಕ ಹಲ್ಲೆಯಾಗುವುದಿಲ್ಲ ಎಂದು ಹೇಳುವ ಮೂಲಕ 12ರ ಹರೆಯದ ಬಾಲಕಿಯ ಎದೆಯನ್ನು ಸ್ಪರ್ಶಿಸಿದ್ದ ಪೋಕ್ಸೊ ಪ್ರಕರಣದ ಆರೋಪಿಯನ್ನು ಇತ್ತೀಚಿಗೆ ಖುಲಾಸೆಗೊಳಿಸಿದ್ದ ನ್ಯಾ.ಗನೇಡಿವಾಲಾ,ನಂತರ ಇನ್ನೊಂದು ಪೊಕ್ಸೊ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕರ ಕೈ ಹಿಡಿದುಕೊಂಡು ಅವರೆದುರು ಪ್ಯಾಂಟ್ ಝಿಪ್ ಬಿಚ್ಚಿದರೆ ಪೋಕ್ಸೊ ದಡಿ ಲೈಂಗಿಕ ಹಲ್ಲೆಯಲ್ಲ ಎಂದು ತೀರ್ಪು ನೀಡಿದ್ದರು ಮತ್ತು ಆರೋಪಿಗೆ ವಿಧಿಸಲಾಗಿದ್ದ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿದ್ದರು.
ಜ.27ರಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಪ್ರಕರಣದ ಆರೋಪಿಯನ್ನು ಬಿಡುಗಡೆಗೊಳಿಸಿದ್ದ ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪಿನ ಬಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಅದಕ್ಕೆ ತಡೆಯನ್ನು ವಿಧಿಸಿತ್ತು.
ಜ.20ರಂದು ಸಭೆ ಸೇರಿದ್ದ ಕೊಲಿಜಿಯಂ ನ್ಯಾ.ಗನೇಡಿವಾಲಾ ಅವರನ್ನು ಖಾಯಂ ನ್ಯಾಯಾಧೀಶರನ್ನಾಗಿ ನೇಮಕಗೊಳಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು.
2007ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇರವಾಗಿ ನೇಮಕಗೊಂಡಿದ್ದ ನ್ಯಾ.ಗನೇಡಿವಾಲಾ 2019,ಫೆ.13ರಂದು ಬಾಂಬೆ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಪದೋನ್ನತಿ ಪಡೆದಿದ್ದರು.







