ರಾಜ್ಯದಲ್ಲಿ ಐದು ಘನ ವಾಹನ ಚಾಲನಾ ತರಬೇತಿ ಕೇಂದ್ರ ಆರಂಭ: ಸಾರಿಗೆ ಸಚಿವ ಲಕ್ಷ್ಮಣ ಸವದಿ
ಕಂಬ್ಲಪದವಿನಲ್ಲಿ ಘನ ವಾಹನ ಚಾಲನಾ ತರಬೇತಿ ಕೇಂದ್ರ ಉದ್ಘಾಟನೆ

ಮಂಗಳೂರು, ಜ.30: ರಾಜ್ಯದಲ್ಲಿ ಒಟ್ಟು ಐದು ಘನ ವಾಹನ ಚಾಲನಾ ತರಬೇತಿ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಈ ಪೈಕಿ ಮಂಗಳೂರಿನ ಕೇಂದ್ರದ ಕಾಮಗಾರಿ ಪೂರ್ಣಗೊಂಡು ಇಂದು ಉದ್ಘಾಟನೆಗೊಂಡಿದೆ ಎಂದು ಉಪ ಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಮಂಗಳೂರು ತಾಲೂಕಿನ ಪಜೀರು ಕಂಬ್ಲಪದವು ಕೆಐಎಡಿಬಿ ಹತ್ತಿರ ಭಾರಿ ವಾಹನ ಚಾಲನಾ ತರಬೇತಿ ಕೇಂದ್ರವನ್ನು ಅವರು ಇಂದು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದಿನ ಹಂತದಲ್ಲಿ ಇನ್ನೂ ನಾಲ್ಕು ಘನ ವಾಹನ ಚಾಲನಾ ತರಬೇತಿ ಕೇಂದ್ರಗಳನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ದೇಶದಲ್ಲಿ ಒಂದೂವರೆ ಲಕ್ಷ ಜನ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಭಾರೀ ವಾಹನ ಚಾಲಕರಿಗೆ ಸಮರ್ಪಕ ಕಡ್ಡಾಯ ತರಬೇತಿ ಅಗತ್ಯವಿದೆ ಸಾರಿಗೆ ಸಚಿವರು ಹೇಳಿದರು.
ಪಜೀರಿನಲ್ಲಿ ಲಘು ವಾಹನ ಚಾಲನಾ ತರಬೇತಿ ಕೇಂದ್ರವನ್ನು ಆರಂಭಿಸುವುದಾಗಿ ಇದೇ ಸಂದರ್ಭದಲ್ಲಿ ಸಚಿವರು ಭರವಸೆ ನೀಡಿದರು.
ಶಾಸಕ ಯು.ಟಿ.ಖಾದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡುತ್ತಾ, ಸುಮಾರು 15 ಕೋಟಿ ರೂ. ವೆಚ್ಚದ 10 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಘನ ವಾಹನ ವಾಹನ ತರಬೇತಿ ಕೇಂದ್ರವನ್ನು ಲೋಕಾರ್ಪಣೆ ಮಾಡಲು ಕಾರಣರಾದ ಲಕ್ಷ್ಮಣ ಸವದಿಯವರಿಗೆ ಕ್ರತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ, ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆಯ ಆಯುಕ್ತ ಎನ್.ಶಿವಕುಮಾರ್, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ಜಿಪಂ ಸದಸ್ಯೆ ಮಮತಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ಸ್ವಾಗತಿಸಿದರು. ಜಂಟಿ ಸಾರಿಗೆ ಆಯುಕ್ತ ಎನ್.ಜಿ.ಗಾಯತ್ರಿದೇವಿ ವಂದಿಸಿದರು.








