ಸಂವಿಧಾನಕ್ಕೆ ಎದುರಾಗಿರುವ ಅಪಾಯ ಎದುರಿಸಲು ಸಂವಿಧಾನ ಓದುವುದು ಅನಿವಾರ್ಯ: ಬಿ.ಬಿ.ನಿಂಗಯ್ಯ

ಚಿಕ್ಕಮಗಳೂರು, ಜ.29: ಪ್ರಸಕ್ತ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಅಂಬೇಡ್ಕರ್ ರಚಿಸಿರುವ ಸಂವಿಧಾನ ಓದಿ ಅರ್ಥೈಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ದೇಶದ ಪ್ರತೀ ನಾಗರಿಕನ ಸರ್ವತೋಮುಖ ಏಳಿಗೆಗೆ ಕಾನೂನು ಮೂಲಕ ಎಲ್ಲ ಅವಕಾಶಗಳನ್ನೂ ಕಲ್ಪಿಸಿರುವ ಸಂವಿಧಾನದ ಅರಿವು ಹೊಂದದ ಹೊರತು ಸಮಾಜದ ಏಳಿಗೆ ಸಾಧ್ಯವಿಲ್ಲ. ಸಂವಿಧಾನಕ್ಕೆ ಎದುರಾಗಿರುವ ಅಪಾಯಗಳನ್ನು ಎದುರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಅತ್ಯಗತ್ಯ ಎಂದು ಮಾಜಿ ಸಚಿವ ಹಾಗೂ ಸಂಸ್ಥೆಯ ಅಧ್ಯಕ್ಷ ಬಿ.ಬಿ.ನಿಂಗಯ್ಯ ಅಭಿಪ್ರಾಯಿಸಿದ್ದಾರೆ.
ಗಣರೋಜ್ಯೋತ್ಸವ ದಿನದ ಅಂಗವಾಗಿ ಮೂಡಿಗೆರೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಸಂಸ್ಥೆಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ದೇಶದ ಎಲ್ಲ ರೀತಿಯ ಅನಿಷ್ಟ ಆಚರಣೆ, ಅಸಮಾನತೆ, ಶೋಷಣೆಯಿಂದ ಎಲ್ಲ ಸಮುದಾಯದ ಜನರಿಗೂ ಮುಕ್ತಿ ನೀಡಿದೆ. ಕೋಮುವಾದಿ ಶಕ್ತಿಗಳು ಸಂವಿಧಾನದ ವಿರುದ್ಧ ಅಪಪ್ರಚಾರರ ಮಾಡುತ್ತಿರುವುದು, ಸಂವಿಧಾನ ಬದಲಾಯಿಸುವಂತಹ ಹುನ್ನಾರ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಮಹತ್ವದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಇದಕ್ಕೆ ದೇಶದ ಪ್ರತೀ ನಾಗರಿಕನೂ ಸಂವಿಧಾನವನ್ನು ಓದಬೇಕು, ಅರ್ಥೈಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ "ಪ್ರತಿಯೊಬ್ಬ ಭಾರತೀಯನೂ ಸಂವಿಧಾನ ಓದಿ ಅರ್ಥೈಸಿಕೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ" ವಿಷಯದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮೂಡಿಗೆರೆ ಪಟ್ಟಣದ ಜಿಜೆಸಿ ಕಾಲೇಜಿನ ತೇಜಸ್ವಿನಿ, ದ್ವಿತೀಯ ಬಹುಮಾನ ಪಡೆದ ಕಳಸ ಜಿಜೆಸಿ ಕಾಲೇಜಿನ ಸಾವಿತ್ರಿ ಹಾಗೂ ತೃತೀಯ ಬಹುಮಾನ ಪಡೆದ ಮೂಡಿಗೆರೆ ಡಿಎಸ್‍ಬಿಜಿ ಕಾಲೇಜಿನ ರಂಜಿತಾ ಅವರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು. ವನಿತಾ ಹಾಗೂ ಶಿಫಾನ್ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಬಿ.ಬಿ.ನಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ನಿಖಿಲ್ ಚಕ್ರವರ್ತಿ, ಪಪಂ ಸದಸ್ಯ ಹೊಸಕೆರೆ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ಎಂ.ಎಸ್.ಅನಂತ್, ಬಿ.ಎಂ.ಶಂಕರ್, ಎಚ್.ಆರ್.ಚಂದ್ರು, ಯು.ಬಿ.ಮಂಜಯ್ಯ, ಕಾರ್ಯದರ್ಶಿಗಳಾದ ಮಹೇಂದ್ರ ಮೌರ್ಯ, ಉಪಸ್ಥಿತರಿದ್ದರು.
ಮಹೇಂದ್ರ ಮೌರ್ಯ ಕಾರ್ಯಕ್ರಮ ನಡೆಸಿಕೊಟ್ಟುರು. ಮುಖಂಡರಾದ ನವರಾಜ್, ಹುಣಸೇಮಕ್ಕಿ ಲಕ್ಷ್ಮಣ್, ಬಿ.ಆರ್.ಸುಬ್ಬಯ್ಯ, ವಸಂತ್, ಮರ್ಲೆ ಧಮೇಶ್, ಕೆಸವಳಲು ಚಂದ್ರು, ರುದ್ರಯ್ಯ ಬಿ.ಎಸ್, ಕೆ.ಬಿ.ಮೊಗಯ್ಯ ಮತ್ತಿತರರು ಉಪಸ್ಥಿತರಿದ್ದರು.