ಕೊಪ್ಪಳ ಉಸ್ತುವಾರಿಯಾಗಿರುವುದು ನನ್ನ ಪುಣ್ಯ: ಸಚಿವ ಬಿ.ಸಿ.ಪಾಟೀಲ್
ಗವಿಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಕೊಪ್ಪಳ, ಜ. 30: ನಾನು ಕನಸಿನಲ್ಲಿಯೂ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಇದೆಲ್ಲ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಯ ಫಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಬಣ್ಣಿಸಿದ್ದಾರೆ.
ಶನಿವಾರ ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ, ಜಿಲ್ಲೆಯ ಗವಿಸಿದ್ದೇಶ್ವರ ಸ್ವಾಮೀಜಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯ ಉಸ್ತುವಾರಿಯಾಗದೇ ಹೋಗಿದ್ದರೆ ಈ ಸ್ವಾಮಿಯ ಜಾತ್ರೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ಕೊಪ್ಪಳ ಉಸ್ತುವಾರಿಯಾಗಿರುವುದು ಪೂರ್ವಜನ್ಮದ ಪುಣ್ಯ ಎಂದರು.
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಇತಿಹಾಸ ಪರಂಪರೆಯುಳ್ಳ ಜಾತ್ರೆಯಾಗಿರುವುದರಿಂದ ಲಕ್ಷ ಜನರು ಸೇರುವುದು ಸಾಮಾನ್ಯವಾಗಿದೆ. ಆದರೆ, ಈ ಬಾರಿ ಕೋವಿಡ್ ಕಾರಣದಿಂದಾಗಿ ಜನರ ಆರೋಗ್ಯದ ದೃಷ್ಟಿಯಿಂದ ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಸಾಯಂಕಾಲ ರಥ ಎಳೆಯುವ ಪದ್ಧತಿಯಿದೆ. ಆದರೆ, ಕೋವಿಡ್ ಕಾರಣದಿಂದಾಗಿ ಬೆಳಗ್ಗೆಯೇ ರಥ ಎಳೆದು, ಪದ್ಧತಿ ಪ್ರಕಾರ ಕಳಸವನ್ನಿಟ್ಟು ಪೂಜೆ ಮಾಡಲಾಗಿದೆ. ಕೊರೋನ ಹಿನ್ನೆಲೆಯಲ್ಲಿ ಈ ಬಾರಿ ಸರಕಾರದ ನಿಯಮಗಳ ಪಾಲನೆ ಮಾಡುವುದರೊಂದಿಗೆ, ಪ್ರತಿ ವರ್ಷದ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.
ಜನರು ಆದಷ್ಟು ಸುರಕ್ಷಿತ ಅಂತರದಲ್ಲಿ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಸಚಿವರು ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಹಾಲಪ್ಪ ಆಚಾರ್ ಸೇರಿದಂತೆ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.







