ಗಾಂಧೀಜಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಬಿಜೆಪಿ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಜ.30: ಮಹಾತ್ಮ ಗಾಂಧೀಜಿಯನ್ನು ಯಾವತ್ತೂ ಗೌರವಿಸದ ಬಿಜೆಪಿಯವರು, ಅಗತ್ಯ ಬಂದಾಗ ಸಂದರ್ಭಕ್ಕೆ ತಕ್ಕ ಹಾಗೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ನಿಸ್ಸೀಮರು ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಂಧೀಜಿಯನ್ನು ಹತ್ಯೆ ಮಾಡಿದವರೇ, ಇಂದು ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲೆ ನಾವು ಆಡಳಿತ ನಡೆಸುತ್ತಿದ್ದೇವೆ ಎಂದು ಹೇಳುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಟೀಕಿಸಿದರು.
ಮಹಾತ್ಮ ಗಾಂಧೀಜಿ ಪಾಲಿಸಿಕೊಂಡು ಬಂದಂತಹ ಅಹಿಂಸೆ, ಸರ್ವಧರ್ಮ ಸಮನ್ವಯತೆ, ಸಹೋದರತೆಯ ಆದರ್ಶಗಳನ್ನು ಬಿಜೆಪಿಯವರು ಎಂದಿಗೂ ಪಾಲಿಸಲಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಅವರ ಹೆಸರನ್ನು ಬಳಸಿಕೊಳ್ಳುವುದರಲ್ಲಿ ಮಾತ್ರ ಅವರು ಹಿಂದೆ ಬೀಳಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ದೇಶವನ್ನು ಬಿಡಿಸುವ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ವಹಿಸಿಕೊಂಡಿದ್ದ ಮಹಾತ್ಮ ಗಾಂಧೀಜಿ, ಎಂದಿಗೂ ಅಧಿಕಾರ ಬಗ್ಗೆ ಆಸೆಯನ್ನು ಹೊಂದಿರಲಿಲ್ಲ. ತಮ್ಮ ಜೀವಿತಾವಧಿಯಲ್ಲಿ ಸದಾ ಕಾಲ ದೇಶದ ಹಿತ, ಜನಸಾಮಾನ್ಯರ ಕಲ್ಯಾಣದ ಬಗ್ಗೆಯೆ ಕಾಳಜಿಯನ್ನು ಹೊಂದಿದ್ದರು. ದೇಶದ ಐಕ್ಯತೆ, ಸಮಗ್ರತೆಗೆ ಅವರು ಕೊಟ್ಟಂತಹ ಕೊಡುಗೆ ಅಪಾರವಾದದ್ದು ಎಂದು ಅವರು ಬಣ್ಣಿಸಿದರು.
ಕಾಂಗ್ರೆಸ್ ಪಕ್ಷ ಸದಾಕಾಲ ರೈತರ ಪರವಾಗಿ ನಿಲ್ಲಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್, ದೇಶದ ರೈತರ ಹಿತಕ್ಕಾಗಿ 72 ಸಾವಿರ ಕೋಟಿ ರೂ.ಸಾಲವನ್ನು ಮನ್ನಾ ಮಾಡಿದ್ದು ಐತಿಹಾಸಿಕ ಸತ್ಯ. ಆದರೆ, ಇವತ್ತು ಬಿಜೆಪಿಯವರು ತಮ್ಮನ್ನು ತಾವು ರೈತರ ಪರ ಎನ್ನುತ್ತಾರೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೆಟ್ಟ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯ ಗಡಿಯಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಧರಣಿ ನಡೆಸುತ್ತಿರುವ ರೈತರ ಬಗ್ಗೆ ಇವರಿಗೆ ಕಾಳಜಿಯಿಲ್ಲ ಎಂದು ಅವರು ಕಿಡಿಗಾರಿದರು.
ಹಿಟ್ಲರ್ ರಕ್ತದ ಬಿಜೆಪಿಯವರು ನಮಗೆ ದೇಶ ಭಕ್ತಿಯ ಪಾಠ ಮಾಡುತ್ತಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಗಾಂಧೀಜಿ ಫೋಟೋನೆ ಇಡುತ್ತಿರಲಿಲ್ಲ ಹಾಗೂ ಆರೆಸೆಸ್ಸ್ ಕೇಂದ್ರ ಕಚೇರಿಯಲ್ಲಿ ದೇಶದ ಬಾವುಟ ಹಾರಿಸುತ್ತಿರಲಿಲ್ಲ. ಈಗ ರೈತರ ಪ್ರತಿಭಟನೆಯನ್ನು ಖಲಿಸ್ತಾನ ಅಂತಾರೆ. ಆದರೆ ಇಂದಿರಾ ಗಾಂಧಿ ಈ ಖಲಿಸ್ತಾನವನ್ನು ವಿರೋಧಿಸಿ ತಮ್ಮ ಪ್ರಾಣ ತೆತ್ತರು. ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಹುತಾತ್ಮರಾದರು. ಇಂದಿನ ಯುವ ಸಮೂಹಕ್ಕೆ ಇವೆಲ್ಲವನ್ನು ಮನದಟ್ಟು ಮಾಡಬೇಕಿದೆ ಎಂದು ಅವರು ಕರೆ ನೀಡಿದರು.
ಬಿಜೆಪಿಯ ದುರಾಡಳಿತದ ವಿರುದ್ಧ ಧ್ವನಿ ಎತ್ತದಿದ್ದರೆ ಎಲ್ಲವನ್ನೂ ಕಳೆದುಕೊಂಡು ಮತ್ತೆ ಗುಲಾಮಗಿರಿಯತ್ತ ಸಾಗಬೇಕಾಗುತ್ತದೆ. ನಮ್ಮ ಸಂವಿಧಾನವು ನಮ್ಮ ಕೈ ತಪ್ಪುವ ಸಾಧ್ಯತೆಗಳಿವೆ. ಆದುದರಿಂದ, ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಹೆಚ್ಚು ಯುವಕರನ್ನು ತಲುಪಿಸಿ ಐತಿಹಾಸಿಕವಾದ ಸತ್ಯಗಳನ್ನು ಅವರಿಗೆ ತಿಳಿಸಿ. ಬಿಜೆಪಿಯವರು ಇದೇ ಜಾಲತಾಣಗಳ ಮೂಲಕ ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು.
ಮಹಾತ್ಮಾ ಗಾಂಧಿಜೀ ಅವರನ್ನ ಆರೆಸೆಸ್ಸ್ ಗೆ ಸಂಬಂಧಿಸಿದ ವ್ಯಕ್ತಿ ಗೋಡ್ಸೆ ಗುಂಡು ಹಾರಿಸಿ ಹತ್ಯೆ ಮಾಡಿದನು. ಗಾಂಧಿಜೀ ಅವರು ಎಲ್ಲ ಜಾತಿ-ಧರ್ಮೀಯರನ್ನ ಒಂದುಗೂಡಿಸಿ ಜಾತ್ಯಾತೀತ ಸಮಾಜ ನಿರ್ಮಿಸಲು, ದೇಶ ಒಗ್ಗೂಡಿಸಲು ಶ್ರಮಿಸಿದರು. ಈಶ್ವರ್ ಅಲ್ಲಾ ತೇರೆ ನಾಮ್ ಎಂದು ಹೇಳುವ ಮೂಲಕ ಇಡೀ ದೇಶ ಒಂದಾಗಿ ಬಾಳುವ ಸಂದೇಶ ನೀಡಿದರು ಎಂದು ಅವರು ಹೇಳಿದರು.
ಸ್ವಾತಂತ್ರ್ಯದ ಬಳಿಕ ಪಂಡಿತ್ ಜವಹರಲಾಲ್ ನೆಹರು ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ, ಮಹಾತ್ಮಾ ಗಾಂಧಿಜೀ ಅವರು, ಹಿಂದು-ಮುಸ್ಲಿಂ ಗಲಭೆ ಪೀಡಿತ ಬಂಗಾಳದಲ್ಲಿ ಶಾಂತಿ-ಅಹಿಂಸೆಯನ್ನ ಸ್ಥಾಪಿಸಲು, ನೊಂದವರಿಗೆ ಸಾಂತ್ವಾನ ಹೇಳಲು ಶ್ರಮಿಸುತ್ತಿದ್ದರು. ಅವರಿಗೆ ಕಿಂಚಿತ್ತೂ ಅಧಿಕಾರದ ವ್ಯಾಮೋಹ ಇರಲಿಲ್ಲ ಎಂದು ಅವರು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವರ್ ಮಾತನಾಡಿ, ದೇಶದಲ್ಲಿ ಒಂದೆಡೆ ಗಾಂಧಿ ತತ್ವ-ಸಿದ್ಧಾಂತಗಳನ್ನು ನೆಲೆಗೊಳಿಸುವವರು ಇದ್ದರೆ, ಇದಕ್ಕೆ ವಿರುದ್ಧವಾದವರು ಮತ್ತೊಂದೆಡೆ ಇದ್ದಾರೆ. ಗಾಂಧಿಜೀ ಅವರನ್ನು ಕೊಂದರು ಅವರ ಸಿದ್ಧಾಂತವೂ ಅಂತ್ಯವಾಗಲಿದೆ ಎಂದು ಭಾವಿಸಿದ್ದರು. ಆದರೆ ಈಗ ಭಾರತ ಸೇರಿ ಬಹಳಷ್ಟು ದೇಶಗಳು ಗಾಂಧಿ ಅವರ ಶಾಂತಿ, ಅಹಿಂಸಾ ತತ್ವಗಳನ್ನ ಅಳವಡಿಸಿಕೊಂಡಿವೆ ಎಂದರು.
ಈ ದೇಶವನ್ನು ಒಂದಾಗಿ ಇಡಬೇಕಾದರೆ ಧರ್ಮ ನಿರಪೇಕ್ಷತೆ, ಲೋಕತಂತ್ರದೆಡೆಗೆ ಸಮಾಜವನ್ನು ಕೊಂಡೊಯ್ಯಬೇಕಿದೆ. ಆದರೆ ಪ್ರಸಕ್ತ ಕಾಲದಲ್ಲಿ ಧರ್ಮ ನಿರಪೇಕ್ಷತೆ, ಲೋಕತಂತ್ರಗಳೆರಡೂ ಅಪಾಯದಲ್ಲಿವೆ. ಈ ಅಪಾಯದಿಂದ ದೇಶವನ್ನು ರಕ್ಷಿಸುವ ಸಂಕಲ್ಪ ಮಾಡುವ ಮೂಲಕ ಮಹಾತ್ಮಾ ಗಾಂಧಿಜೀ ಅವರಿಗೆ ನಾವು ನೈಜ ಶ್ರದ್ಧಾಂಜಲಿಯನ್ನು ಅರ್ಪಿಸಬೇಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ರಾಮಲಿಂಗಾರೆಡ್ಡಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಎಚ್.ಆಂಜನೇಯ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.







