ರೈತರ ಹೋರಾಟ ಹತ್ತಿಕ್ಕುತ್ತಿರುವ ಮೋದಿ ಸರಕಾರದ ಗೂಂಡಾಗಳು: ಸಿದ್ದರಾಮಯ್ಯ

ಬೆಂಗಳೂರು, ಜ.30: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಗೂಂಡಾಗಳನ್ನು ಬಳಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನವನ ಮೈದಾನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹುತಾತ್ಮ ದಿನದಂದು ಸಂಯುಕ್ತ ಕಿಸಾನ್ ಮೋರ್ಚಾ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಕರಾಳ ದಿನವನ್ನುದ್ದೇಶಿಸಿ ಅವರು ಮಾತನಾಡಿದರು.
ನ್ಯಾಯಯುತ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಗೂಂಡಾಗಳನ್ನು ಬಳಸುತ್ತಿರುವ ಕೇಂದ್ರ ಸರಕಾರದ ವರ್ತನೆ ನಾಚಿಕೆಗೇಡು. ಇಂತಹ ವರ್ತನೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ತಪ್ಪು ಮಾಡುವವರನ್ನು ಜನ ಸಹಿಸುವುದಿಲ್ಲ. ಪದೇ ಪದೇ ಜನರನ್ನು ದಾರಿ ತಪ್ಪಿಸಲು ಆಗದು. ಕಾನೂನು ವಾಪಸ್ ಪಡೆಯುವವರೆಗೆ ಹೋರಾಟ ನಿಲ್ಲಿಸುವುದಿಲ್ಲ. ಸರ್ವಾಧಿಕಾರಿ ಹಿಟ್ಲರ್ ಕತೆ ಕೊನೆಗೆ ಏನಾಯಿತು ಎಂಬುದನ್ನು ಪ್ರಧಾನಿಯವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಕೃಷಿ, ಹೈನುಗಾರಿಕೆ ಮತ್ತು ರೈತರನ್ನು ನಾಶ ಮಾಡುವ ಕಾಯ್ದೆಗಳನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗಿವೆ. ಬಂಡವಾಳಶಾಹಿಗಳ ಕುಮ್ಮಕ್ಕು ಇದಕ್ಕೆ ಕಾರಣ. ಅವರು ಹೇಳಿದಂತೆ ಕೇಳುವವರು ಪ್ರಧಾನಿ ನರೇಂದ್ರ ಮೋದಿ ಎಂದ ಅವರು, ದೇಶದ ಜಿಡಿಪಿ ಬೆಳವಣಿಗೆ ಕುಸಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಿಸಿದಿದ್ದಾದರೂ ಏನು? ಎಂದರು.
ಎಪಿಎಂಸಿಗಳನ್ನು ಮುಚ್ಚಿ ಮಾರುಕಟ್ಟೆಗಳನ್ನು ಆರಂಭಿಸಲು ಖಾಸಗಿಯವರಿಗೆ ಅವಕಾಶ ನೀಡಬೇಕೆಂತೆ. ಮಾರುಕಟ್ಟೆ ಖಾಸಗಿಯವರ ಪಾಲಾದರೆ ಅವರೇ ನಿಯಂತ್ರಣ ಮಾಡುತ್ತಾರೆ. ಆಗ ರೈತರು ಬೆಳೆದ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆಯೂ ಸಿಗುವುದಿಲ್ಲ. ಇಂಥ ಕಾಯ್ದೆ, ಕಾನೂನು ಒಪ್ಪಬೇಕು ಎಂದು ಹೇಳುವುದು ಯಾವ ನ್ಯಾಯ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ವಿದೇಶದಿಂದ ಬರುವ ಗೋಮಾಂಸ ಸೇವಿಸಬಹುದಂತೆ. ಗೋವಾ, ಕೇರಳದಲ್ಲಿ ತಿನ್ನಬಹುದಂತೆ. ಕರ್ನಾಟಕದಲ್ಲಿ ಮಾತ್ರ ಗೋಮಾತೆಯಂತೆ. ಏಕೆ ವಿದೇಶದಲ್ಲಿರುವ ಹಸುಗಳು, ಹೊರ ರಾಜ್ಯದಲ್ಲಿರುವ ರಾಸುಗಳು ಗೋಮಾತೆ ಅಲ್ಲವೇ? ಎಂದು ಅವರು ಹೇಳಿದರು.
'ಆರೆಸ್ಸೆಸ್‍ನವರು ಉತ್ಪಾದನೆ ಮಾಡುತ್ತಾರಾ?'
ದೇಶದಲ್ಲಿ 280 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತಿದೆ. ಆರೆಸ್ಸೆಸ್‍ನವರು ಅದನ್ನು ಉತ್ಪಾದನೆ ಮಾಡುತ್ತಿದ್ದಾರಾ? ಅಲ್ಲದೆ, ಅವರು ನೇಗಿಲೇ ಹಿಡಿದಿಲ್ಲ. ಈಗ ಗೋಹತ್ಯೆ ನಿಷೇಧ ಕಾಯ್ದೆಯ ಜಪ ಮಾಡುತ್ತಿದ್ದಾರೆ. ಹಾಗಾದರೆ ವಯಸ್ಸಾದ ರಾಸುಗಳನ್ನು ರೈತರು ಏನು ಮಾಡಬೇಕು.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ







