ಕೊರೋನ ಲಸಿಕೆ ಪಡೆದ ನಾಲ್ವರು ವೈದ್ಯರಿಗೆ ಕೊರೋನ ಪಾಸಿಟಿವ್ !

ಚಾಮರಾಜನಗರ: ಕೋವಿಡ್ ಪ್ರಕರಣಗಳು ಗಣನೀಯ ಪ್ರಕರಣದಲ್ಲಿ ಕಡಿಮೆಯಾಗುತ್ತಿವೆ ಎಂದು ನಿಟ್ಟುಸಿರು ಬಿಡುತ್ತಿರುವ ನಡುವೆಯೇ ಜಿಲ್ಲಾಸ್ಪತ್ರೆಯ ಏಳು ಮಂದಿ ವೈದ್ಯರಿಗೆ ಕೊರೋನ ಪಾಸಿಟಿವ್ ಆಗಿರುವುದು ಆತಂಕಕಾರಿಯಾಗಿದೆ. ಇವರಲ್ಲಿ ನಾಲ್ವರು ವೈದ್ಯರು ಕೋವಿಡ್ ಲಸಿಕೆ ಪಡೆದಿದ್ದರು ಎಂಬುದು ಗಮನಾರ್ಹ ವಿಷಯವಾಗಿದೆ.
ಕೋವಿಡ್ ಪಾಸಿಟಿವ್ ಆಗಿರುವ ಏಳು ಮಂದಿ ವೈದ್ಯರೂ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಸೋಂಕು ಲಕ್ಷಣಗಳಿಲ್ಲ. ಓರ್ವ ವೈದ್ಯರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಹೋಂ ಐಸೋಲೇಷನ್ ಆಗಿದ್ದಾರೆ. ಇವರಲ್ಲಿ ನಾಲ್ವರು ವೈದ್ಯರು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಪಡೆದಿದ್ದರು.
ಕೋವಿಡ್ ನಿರೋಧಕ ಲಸಿಕೆ ಪಡೆದಿದ್ದರೂ ಸೋಂಕು ತಗುಲಿರುವ ಬಗ್ಗೆ ಸ್ಪಷ್ಟೀಕರಣ ನೀಡಿದ ಕೋವಿಡ್ ನೋಡೆಲ್ ಅಧಿಕಾರಿ ಡಾ. ಮಹೇಶ್, ನಾವು ಇದೀಗ ಕೋವಿಡ್ ಲಸಿಕೆ ಪಡೆದಿದ್ದೇವೆ. ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕವಷ್ಟೇ ಅದು ಪರಿಣಾಮ ಬೀರುತ್ತದೆ. ಹಾಗಾಗಿ ಒಂದು ಡೋಸ್ ಲಸಿಕೆ ಪಡೆದವರು, ತಮಗೆ ಕೋವಿಡ್ ಬರುವುದಿಲ್ಲ ಎಂದು ಮೈಮರೆಯುವಂತಿಲ್ಲ ಎಂದರು.





