ತೆರವು ಕಾರ್ಯಾಚರಣೆಯ ಮಧ್ಯಂತರ ಆದೇಶಗಳ ವಿಸ್ತರಣೆ ಫೆ.8ಕ್ಕೆ ಕೊನೆಗೊಳಿಸಿ ಹೈಕೋರ್ಟ್ ಆದೇಶ

ಬೆಂಗಳೂರು, ಜ.30: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಕೋರ್ಟ್‍ಗಳು ತೆರವು ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಮಧ್ಯಂತರ ಆದೇಶಗಳನ್ನು ವಿಸ್ತರಿಸಿಕೊಂಡು ಬಂದಿದ್ದ ಹೈಕೋರ್ಟ್, ಈ ವಿಸ್ತರಣೆಯನ್ನು ಫೆ.8ಕ್ಕೆ ಕೊನೆಗೊಳಿಸಿ ಆದೇಶಿಸಿದೆ.
ಕೋವಿಡ್-19ನಿಂದ ಸಾರ್ವಜನಿಕರು ನ್ಯಾಯಾಲಯಗಳ ಮೊರೆ ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯದ ಕೋರ್ಟ್‍ಗಳು ತೆರವು ಕಾರ್ಯಾಚಣೆಗಳಿಗೆ(eviction, demolition) ಸಂಬಂಧಿಸಿದಂತೆ ಹೊರಡಿಸಿರುವ ಮಧ್ಯಂತರ ಆದೇಶಗಳನ್ನು ಹೈಕೋರ್ಟ್ 2020 ರ ಎ.16ರಂದು ಒಂದು ತಿಂಗಳ ಅವಧಿಗೆ ವಿಸ್ತರಿಸಿತ್ತು. ಬಳಿಕ ಕೊರೋನ ಸೋಂಕು ಕಡಿಮೆಯಾಗದ ಕಾರಣದಿಂದಾಗಿ ಈ ಆದೇಶವನ್ನು ವಿಸ್ತರಿಸಿಕೊಂಡು ಬಂದಿತ್ತು.
ಈ ಮೂಲಕ ಹೈಕೋರ್ಟ್ ಪೀಠಗಳು, ಜಿಲ್ಲಾ ನ್ಯಾಯಾಲಯಗಳು, ಸಿವಿಲ್ ಕೋರ್ಟ್‍ಗಳು, ಕೌಟುಂಬಿಕ ನ್ಯಾಯಾಲಯಗಳು, ಕಾರ್ಮಿಕ ನ್ಯಾಯಾಲಯಗಳು, ಕೈಗಾರಿಕಾ ನ್ಯಾಯಾಧೀಕರಣಗಳು ನೀಡಿದ್ದ ತೆರವು ಆದೇಶಗಳ ಅನ್ವಯ ಕಾರ್ಯಾಚರಣೆ ನಡೆಸುವಂತಿರಲಿಲ್ಲ.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಮಧ್ಯಂತರ ಆದೇಶಗಳನ್ನು ವಿಸ್ತರಿಸಿ ಹೊರಡಿಸಿದ್ದ ಆದೇಶ ಫೆ. 8ಕ್ಕೆ ಕೊನೆಗೊಳ್ಳಲಿದೆ ಎಂದು ಆದೇಶಿಸಿದೆ. ಇದೇ ವೇಳೆ ಕಾಲಮಿತಿ ಕಾಯ್ದೆ 1963ರ ಸೆಕ್ಷನ್ 4 ಪ್ರಕಾರ ಪ್ರಕರಣಗಳನ್ನು ದಾಖಲಿಸಲು, ಮೇಲ್ಮನವಿ ಅಥವಾ ಅರ್ಜಿಗಳನ್ನು ಸಲ್ಲಿಸಲು ವಿಸ್ತರಿಸಿಕೊಂಡು ಬರಲಾಗಿದ್ದ ಕಾಲಮಿತಿ ವಿಸ್ತರಣೆಯನ್ನೂ ಫೆ.8ಕ್ಕೆ ಕೊನೆಗೊಳಿಸಲಾಗಿದೆ.







