ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಸಿಸಿಬಿ ಪೊಲೀಸರು ಬಾರ್ ನಲ್ಲಿ ಪಾರ್ಟಿ !
ವೀಡಿಯೊ ವೈರಲ್ ಆಗುತ್ತಿದ್ದಂತೆ ತನಿಖೆಗೆ ಸೂಚಿಸಿದ ಮಂಗಳೂರು ಕಮಿಷನರ್

ಮಂಗಳೂರು, ಜ.30: ಕರ್ತವ್ಯದ ವೇಳೆ ಮಂಗಳೂರು ಹೊರವಲಯದ ಕುತ್ತಾರು ಬಳಿ ಬಾರ್‌ವೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಪಾರ್ಟಿ ನಡೆಸಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ಈ ಬಗ್ಗೆ ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದಾರೆ.
ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆಗೆ ಹಾಜರಾಗುವಂತೆ ಪಾರ್ಟಿಯಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಮಂಗಳೂರು ಹೊರವಲಯದ ಕುತ್ತಾರು ಬಳಿಯ ಬಾರ್‌ನಲ್ಲಿ ಮಧ್ಯಾಹ್ನ ಈ ಪಾರ್ಟ್ ನಡೆಸಿದೆ ಎಂದು ಹೇಳಲಾಗಿದೆ. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಜೊತೆ ಹಾಡಹಗಲೇ ಪಾರ್ಟಿ ಮಾಡಿದ್ದ ಆರೋಪವಿದೆ. ಹೊರಗೆ ಸರಕಾರಿ ಟಿಟಿ ವಾಹನ ನಿಲ್ಲಿಸಿ ಬಾರ್‌ನಲ್ಲಿ ಸಿಸಿಬಿಯ ಎಂಟು ಸಿಬ್ಬಂದಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದ್ದು, ಇದರ ವೀಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ತನಿಖೆಗೆ ಆದೇಶಿಸಿದ್ದಾರೆ. ಈ ವೀಡಿಯೊ ಆಧಾರದಲ್ಲಿ ತನಿಖೆಗೆ ಹಾಜರಾಗುವಂತೆ ಸಿಬ್ಬಂದಿಗೆ ತನಿಖಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





