ವಿದ್ಯಾರ್ಥಿನಿಗೆ ಅರ್ಧ ಗಂಟೆ ಅವಧಿ ತನ್ನ ಹುದ್ದೆ ಬಿಟ್ಟುಕೊಟ್ಟ ಉಡುಪಿ ಜಿಪಂ ಸಿಇಒ !

ಉಡುಪಿ, ಜ.30: ಸಾಮಾಜಿಕ ಕಳಕಳಿಯ ಪ್ರಶ್ನೆಗಳನ್ನು ಕೇಳಿದ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಎಸೆಸೆಲ್ಸಿ ವಿದ್ಯಾರ್ಥಿನಿ ವರ್ಷಾಳಿಗೆ ಉಡುಪಿ ಜಿಪಂ ಸಿಇಒ ಡಾ. ನವೀನ್ ಭಟ್, ಅರ್ಧ ಗಂಟೆಯ ಅವಧಿ ತನ್ನ ಹುದ್ದೆಯನ್ನು ಬಿಟ್ಟುಕೊಟ್ಟು ಕುರ್ಚಿಯ ಮೇಲೆ ಕೂರಲು ಅವಕಾಶ ನೀಡಿದ ಅಪರೂಪದ ಘಟನೆ ಇಂದು ನಡೆದಿದೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಪ್ರತಿಭಾನ್ವಿತ ಬಾಲಕಿಯರಿಗೆ ಇಂದು ಉಡುಪಿ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಾಗಾರದ ಸಂವಾದದಲ್ಲಿ ಮಕ್ಕಳು ಸ್ವಚ್ಛತೆ, ಚರಂಡಿ ವ್ಯವಸ್ಥೆ, ಗ್ರಾಮೀಣ ರಸ್ತೆ ನಿರ್ಮಾಣ, ಕುಡಿಯು ನೀರು ಕುರಿತ ಪ್ರಶ್ನೆಗಳನ್ನು ಸಿಇಓಗೆ ಕೇಳಿದರು. ಇದಕ್ಕೆ ಸಿಇಓ ನಿರರ್ಗಳವಾಗಿ ಉತ್ತರವನ್ನು ನೀಡಿ ವಿದ್ಯಾರ್ಥಿಗಳಿಗೆ ಅತ್ಯಮೂಲ್ಯ ವಾದ ಮಾಹಿತಿ ನೀಡಿದರು.
ಇದೇ ವೇಳೆ ಸಾಮಾಜಿಕ ಕಳಕಳಿ ಹಲವು ಪ್ರಶ್ನೆಗಳನ್ನು ಕೇಳಿದ ವರ್ಷಾಳಿಗೆ ಸಿಇಒ, ಅರ್ಧ ಗಂಟೆಯ ಅವಧಿಗೆ ತನ್ನ ಹುದ್ದೆಯನ್ನು ಅಲಕಂರಿಸಲು ಹೇಳಿ, ಕುರ್ಚಿಯ ಮೇಲೆ ಕೂರಿಸಿದರು. ಬಳಿಕ ಆಕೆಯನ್ನು ಈಗ ನೀನು ಯಾವ ಸಾಮಾಜಿಕ ಸುಧಾರಣೆ ಕಾರ್ಯ ವಾಡಲು ಹೇಳುವಿರಿ ಎಂದು ಕೇಳಿದರು. ಆಗ ಆಕೆ ಪ್ಲಾಸ್ಟಿಕ್ ವಿಲೇವಾರಿ, ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಹಾಗೂ ನಿರುದ್ಯೋಗ ನಿವಾರಣೆ ಕುರಿತು ಸಿಇಒ ಜೊತೆ ಚರ್ಚಿಸಿದಳು. ವರ್ಷಾಳ ಎಲ್ಲ ಪ್ರಶ್ನೆಗಳಿಗೆ ಸಿಇಒರವರು ಉತ್ತರಗಳನ್ನು ನೀಡಿದರು.
ಮಕ್ಕಳಿಗೆ ಇಲಾಖೆ ಮಾಹಿತಿ: ಇದಕ್ಕೂ ಮೊದಲು ನಡೆದ ಕಾರ್ಯಾ ಗಾರದಲ್ಲಿ ಜಿಪಂ ಉಪಕಾರ್ಯದರ್ಶಿ ಕೆ.ಆರ್. ಪಡ್ನೇಕರ್, ಮೂರು ಹಂತದ ಆಡಳಿತ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರು. ನಂತರ ಮುಖ್ಯ ಲೆಕ್ಕಾಧಿಕಾರಿಗಳು ಹಣಕಾಸಿನ ವ್ಯವಸ್ಥೆ, ತೆರಿಗೆ ಸಂಗ್ರಹ, ಬಳಕೆ ಹಾಗೂ ಯೋಜನೆ ಮಾಡುವ ಕುರಿತು ಮಾಹಿತಿ ನೀಡಿದರು.
ನಂತರ ಶಿಕ್ಷಣ ಇಲಾಖೆಯ ಕಚೇರಿಗೆ ತೆರಳಿದ ಮಕ್ಕಳಿಗೆ ಉಪನಿರ್ದೇಶಕ ಎನ್.ಎಚ್.ನಾಗೂರ, ಇಲಾಖೆಯ ಸಮಗ್ರ ಮಾಹಿತಿಯನ್ನು ನೀಡಿದರು. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ಶೇಷಪ್ಪ, ಮಕ್ಕಳ ಮತ್ತು ಮಹಿಳೆಯರ ರಕ್ಷಣೆ, ಅವರ ಅಭಿವೃದ್ಧಿಗೆ ಇರುವ ವಿವಿಧ ಕಾರ್ಯಕ್ರಮಗಳನ್ನು ತಿಳಿಸಿಕೊಟ್ಟರು. ಬಾಲ್ಯವಿವಾಹ, ಅತ್ಯಾಚಾರಗಳ ನಿಯಂತ್ರಣದ ಕುರಿತ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.
ನಂತರ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪ್ರವಾ ಸೋದ್ಯಮ ಇಲಾಖೆ ಕಚೇರಿಗೆ ಆಗಮಿಸಿ ಮಾಹಿತಿಗಳನ್ನು ಪಡೆದುಕೊಂಡರು.











