ಫೆ.2ರ ವೇಳೆಗೆ ಪ್ರತಿಭಟನಾ ಸ್ಥಳಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ:ರೈತ ನಾಯಕ ರಾಜೇವಾಲ್

photo:twitter
ಚಂಡಿಗಡ,ಜ.30: ಕೇಂದ್ರದ ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ದಿಲ್ಲಿಯ ಗಡಿ ಕೇಂದ್ರಗಳಲ್ಲಿ ಫೆ.2ರ ವೇಳೆಗೆ ವಿವಿಧ ರಾಜ್ಯಗಳಿಂದ ದಾಖಲೆ ಸಂಖ್ಯೆಯಲ್ಲಿ ಜನರು ಜಮಾವಣೆಗೊಳ್ಳುವ ನಿರೀಕ್ಷೆಯಿದೆ ಎಂದು ರೈತನಾಯಕ ಬಲ್ ಬೀರಸಿಂಗ್ ರಾಜೇವಾಲ್ ಅವರು ಶನಿವಾರ ಇಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಜ.26ರಿಂದ ದಿಲ್ಲಿಯ ಗಡಿಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಇಂದಿನ ಪ್ರತಿಭಟನೆಯೂ ಶಾಂತಿಯುತವಾಗಿತ್ತು ಎಂದರು. ಗಣತಂತ್ರ ದಿನದಂದು ದಿಲ್ಲಿಯಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದ ಅವರು,ಅದನ್ನು ದುರದೃಷ್ಟಕರ ಎಂದು ಬಣ್ಣಿಸಿದರು.
ಪಂಜಾಬ್,ಹರ್ಯಾಣ,ಉತ್ತರ ಪ್ರದೇಶ,ರಾಜಸ್ಥಾನ ಮತ್ತು ಉತ್ತರಾಖಂಡಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಪ್ರತಿಭಟನಾ ಸ್ಥಳಗಳನ್ನು ತಲುಪುತ್ತಿದ್ದಾರೆ. ಫೆ.2ರ ವೇಳೆಗೆ ಪ್ರತಿಭಟನಾ ಸ್ಥಳಗಳಲ್ಲಿ ಮತ್ತೊಮ್ಮೆ ದಾಖಲೆ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆಯಿದೆ ಎಂದ ರಾಜೇವಾಲ್,ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಿರುವುದಕ್ಕಾಗಿ ಹರ್ಯಾಣ ಸರಕಾರವನ್ನು ಖಂಡಿಸಿದರು.
ಕೇಂದ್ರವು ಜ.26ರಂದು ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರವನ್ನು ಪ್ರಸ್ತಾಪಿಸಿ ‘ದುರದೃಷ್ಟಕರ ಘಟನೆಗಳ’ ಚಿತ್ರಗಳನ್ನು ತೋರಿಸುವ ಮೂಲಕ ಜನರಲ್ಲಿ ಭೀತಿಯ ಭಾವನೆಯನ್ನು ಮೂಡಿಸುತ್ತಿದೆ. ಅದು ರೈತರ ಆಂದೋಲನಕ್ಕೆ ಕಳಂಕ ಹಚ್ಚಲು ಸುಳ್ಳು ಪ್ರಚಾರದ ಮೂಲಕ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ದಿಲ್ಲಿಯ ಗಡಿಗಳಲ್ಲಿ ಸೇರುತ್ತಿರುವ ರೈತರನ್ನು ಕೋರಿಕೊಂಡ ರಾಜೇವಾಲ್,‘ಶಾಂತಿಯುತ ಪ್ರತಿಭಟನೆ ನಮ್ಮ ಹೊಣೆಗಾರಿಕೆಯಾಗಿದೆ ’ ಎಂದರು.
ಪ್ರತಿಭಟನಾ ಸ್ಥಳದಲ್ಲಿರುವ ರೈತರನ್ನು ಪ್ರಚೋದಿಸುವ ಮೂಲಕ ಹಿಂಸಾಚಾರವನ್ನು ಹುಟ್ಟುಹಾಕಲು ಸರಕಾರವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು,‘ಆದರೆ ನಾವು ಕಟ್ಟೆಚ್ಚರದಲ್ಲಿದ್ದೇವೆ,ನಾವು ಯಾವುದೇ ಹಿಂಸೆಯಲ್ಲಿ ತೊಡಗುವುದಿಲ್ಲ ’ಎಂದರು.
ತನ್ನ ಮೊಂಡು ನಿಲುವನ್ನು ಕೈಬಿಡುವಂತೆ ಮತ್ತು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವಂತೆ ಅವರು ಕೇಂದ್ರವನ್ನು ಕೋರಿಕೊಂಡರು.
ಪ್ರತಿಭಟನಾನಿರತ ರೈತರು ಮತ್ತು ಸರಕಾರದ ಪ್ರತಿನಿಧಿಗಳ ನಡುವೆ ಮುಂದಿನ ಸುತ್ತಿನ ಮಾತುಕತೆಗಳ ಕುರಿತಂತೆ ರಾಜೇವಾಲ್,‘ಅವರು ಕರೆದರೆ ನಾವು ಖಂಡಿತವಾಗಿಯೂ ಮಾತುಕತೆಗಳಿಗೆ ಹೋಗುತ್ತೇವೆ ’ಎಂದರು.







