ಬ್ರಹ್ಮಾವರ : ಎಂಟು ಎಕರೆಯ ಹಕ್ಕುಪತ್ರಕ್ಕಾಗಿ 40 ವರ್ಷದಿಂದ ಕಾದಿರುವ ಮಾಜಿ ಸೈನಿಕ

ಶ್ರೀಧರ ನಾಯ್ಕ
ನಾಲ್ಕೂರು (ಬ್ರಹ್ಮಾವರ), ಜ. 30: ಏಳು ವರ್ಷಗಳ ಕಾಲ ಭಾರತೀಯ ಭೂಸೇನೆಯಲ್ಲಿ ದುಡಿದಿದ್ದಕ್ಕಾಗಿ ಪಡೆದ ಎಂಟು ಎಕರೆ ಜಾಗದ ಹಕ್ಕುಪತ್ರಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸುತ್ತಿರುವ 80ರ ಹರೆಯ ಮಾಜಿ ಸೈನಿಕರಾದ ಕೊಕ್ಕರ್ಣೆ ಸಮೀಪದ ಕುದಿ ಗ್ರಾಮದ ಶ್ರೀಧರ ನಾಯ್ಕಾ ಇಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನಾಲ್ಕೂರು ಗ್ರಾಮದಲ್ಲಿ ನಡೆಸಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈ ಭೂಮಿಯ ಹಕ್ಕುಪತ್ರ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿದರು.
1965ರಲ್ಲಿ ಸೈನ್ಯಕ್ಕೆ ಸೇರಿದ್ದ ಶ್ರೀಧರ ನಾಯಕ್ ಬೆಂಗಳೂರು ಹಾಗೂ ಕಾಶ್ಮೀರ ಗಡಿ ಪ್ರದೇಶವಾದ ಪೂಂಖ್ನಲ್ಲಿ ಕರ್ತವ್ಯ ನಿರ್ವಹಿಸಿದ್ದು, 1972ರಲ್ಲಿ ಅಪಘಾತದಿಂದ ಗಾಯಗೊಂಡು ಸೇನೆಯಿಂದ ನಿವೃತ್ತರಾಗಿದ್ದರು. ಬಳಿಕ ಊರಿಗೆ ಬಂದು ಶಿಕ್ಷಕರಾಗಿ ಸೇವೆ ಸಲ್ಲಿಸಿ 1990ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಸೇನೆಯಿಂದ ಅವರಿಗೆ ನಂಚಾರು ಗ್ರಾಮದಲ್ಲಿ ಎಂಟು ಎಕರೆ ಭೂಮಿ ದೊರಕಿದ್ದು, ಅದೀಗ ಡೀಮ್ಡ್ ಫಾರೆಸ್ಟ್ ಪ್ರದೇಶದಲ್ಲಿ ಬರುತಿದ್ದು, ಅದಕ್ಕೆ ಅವರಿಗೆ ಹಕ್ಕುಪತ್ರ ಇನ್ನೂ ಸಿಕ್ಕಿಲ್ಲ ಎಂದು ಶ್ರೀಧರ ನಾಯ್ಕಿ ತಮ್ಮ ಅಳಲು ತೊಡಿಕೊಂಡರು.
ಈ ಜಾಗದಲ್ಲಿ ತಾವು 300ಕ್ಕೂ ಅಧಿಕ ಗೇರು ಸಸಿ ಹಾಗೂ ಇತರ ಗಿಡಗಳನ್ನು ಹಾಕಿದ್ದು, ಅಲ್ಲಿಗೆ ಹೋಗಲು ತಮಗೆ ಅರಣ್ಯಾಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದವರು ಹೇಳಿದರು. ಇವರೀಗ ತಮ್ಮ ಕುದಿ ಗ್ರಾಮದಲ್ಲಿರುವ ಪಿತ್ರಾರ್ಜಿತ ಆಸ್ತಿಯಲ್ಲಿ ಮಗನೊಂದಿಗಿದ್ದು, ತನಗೆ ಸಿಕ್ಕಿದ ಜಾಗದ ಸ್ವಾಧೀನಕ್ಕೆ ಹೋರಾಡು ತಿದ್ದಾರೆ. ಇದನ್ನು ಕುಂದಾಪುರದ ಎಸಿಯವರು ಪರಿಶೀಲನೆ ನಡೆಸಿ ನಿಮಗೆ ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಮಾಧಾನ ಮಾಡಿದರು.
ಮಿಯಾರು ಹಾಡಿಮನೆಯ ಸರಸ್ವತಿ, ಸುಶೀಲಾ ಹಾಗೂ ಗಿರಿಜಾರದ್ದೂ ಇದೇ ಸಮಸ್ಯೆ. ಅವರ ತಲಾ 9 ಸೆನ್ಸ್ ಜಾಗಕ್ಕೆ 94ಸಿಯಲ್ಲಿ ಅರ್ಜಿ ಸಲ್ಲಿಸಿದ್ದರೂ, ಡೀಮ್ಡ್ ಫಾರೆಸ್ಟ್ ಜಾಗ ಎಂದು ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ದೂರಿದರು. 30 ವರ್ಷದಿಂದ ತಾವೀ ಜಾಗದಲ್ಲಿದ್ದು ತಮಗೆ ಬೇರೆ ಎಲ್ಲೂ ಸ್ಥಳವಿಲ್ಲ. ಹೀಗಾಗಿ ನಾವು ಜಾಗ ಬಿಟ್ಟು ಎಲ್ಲಿಗೆ ಹೋಗಲಿ ಎಂದು ಮೂವರು ಮಹಿಳೆಯರು ಮನವಿ ಮಾಡಿದರು.
ಜಿಲ್ಲಾ ಸಮತಾ ಸೈನಿಕ ದಳ ಸಲ್ಲಿಸಿದ ಅರ್ಜಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಸಮುದಾಯ ಭವನ ಸೇರಿದಂತೆ ನಾಲ್ಕೂರಿನ ಆರು ಎಕರೆ ಡಿಸಿ ಮನ್ನಾ ಜಮೀನಲ್ಲಿ ಪಂಚಾಯತ್ ಕಚೇರಿ, ವಿಎ ಕಚೇರಿ, ಗೋಡೌನ್, ಸರಕಾರಿ ಆಸ್ಪತ್ರೆ, ತಲೆ ಎತ್ತಿದ್ದು, ಖಾಸಗಿಯವರೂ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಇವುಗಳನ್ನು ತೆರವುಗೊಳಿಸಿ ದಲಿತರಿಗೆ ನೀಡಬೇಕು ಎಂದು ಕೋರಲಾಗಿತ್ತು.
ಡಿಸಿ ಮನ್ನಾ ಭೂಮಿಯಲ್ಲಿ ಇರುವ ಸರಕಾರಿ ನಿರ್ಮಾಣವನ್ನು ಉಳಿಸಿಕೊಂಡು ಖಾಸಗಿಯವರನ್ನು ತೆರವುಗೊಳಿಸುವಂತೆ ಸೂಚಿಸಿದ ಡಿಸಿ, ಅಷ್ಟೇ ಭೂಮಿಯನ್ನು ಬೇರೆ ಕಡೆಗೆ ನೀಡುವಂತೆ ಕುಂದಾಪುರದ ಎಸಿಯವರಿಗೆ ಸೂಚಿಸಿದರು. ಅದೇ ರೀತಿ ನಾಲ್ಕೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 12 ಲಕ್ಷ ರೂ.ಬಿಡುಗಡೆಯಾಗಿ ನಾಲ್ಕು ವರ್ಷಗಳಾದರೂ ಇನ್ನೂ ಜಾಗವನ್ನು ತೋರಿಸುತ್ತಿಲ್ಲ ಎಂದು ಮತ್ತೊಂದು ಅರ್ಜಿಯಲ್ಲಿ ದೂರಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.
ಶುಕ್ರವಾರದವರೆಗೆ ಒಟ್ಟು 53 ಸಾರ್ವಜನಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳ ಕುರಿತು ಸ್ಥಳದಲ್ಲೇ 94 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಸಾರ್ವಜನಿಕರ ಎಲ್ಲಾ ಅರ್ಜಿಗಳನ್ನು ವೀಕ್ಷಿಸಿ, ಅವರೆಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಸ್ಥಳದಲ್ಲೇ ಇತ್ಯರ್ಥಪಡಿಸಬಹುದಾದ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಮಾಡಿದರು. ಡೀಮ್ಡ್ ಪಾರೆಸ್ಟ್, ರಿಸರ್ವ್ ಪಾರೆಸ್ಟ್, ಜಾಗ ಮಂಜೂರಾತಿ ಮುಂತಾದ ಅರ್ಜಿಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ದಿನದಲ್ಲಿ ಸ್ಥಳದಲ್ಲೇ ಆಧಾರ್ ಕಾರ್ಡ್ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೌತಿ ಖಾತೆ ಬದಲಾವಣೆ ಕುರಿತ ಅರ್ಜಿಗೆ, ವಂಶವೃಕ್ಷ ನೀಡುವ ಮೂಲಕ ಖಾತೆ ಬದಲಾವಣೆಗೆ ಸ್ಥಳದಲ್ಲಿಯೇ ಪರಿಹಾರ ನೀಡು ವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. 94 ಸಿ ಮತ್ತು ಪಾರ್ಮ್ ನಂ. 57ರಲ್ಲಿ ಅರ್ಜಿಗಳು ಬಾಕಿ ಉಳಿದಿದ್ದು, ಹೊಸದಾಗಿ ಕಡತಗಳನ್ನು ತಯಾರಿಸಿ ಕಮಿಟಿ ಮುಂದೆ ಮಂಡಿಸಲು ಕ್ರಮ ವಹಿಸಲಾಗುವುದು. ರೇಷನ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಸ್ವೀಕೃತಗೊಂಡಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಕಾರ್ಯಕ್ರಮದ ಕೊನೆಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತ್ತಾ ತಿಳಿಸಿದರು.
ರಾಜ್ಯದಲ್ಲಿ ಪೈಲಟ್ ಕಾರ್ಯಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳ ವಾಸ್ತವ್ಯ ಕಾರ್ಯಕ್ರಮವನ್ನು ಸರಕಾರದ ಸೂಚನೆ ಯಂತೆ ಆಯೋಜಿಸಿದ್ದು, ಇಂದಿನ ಕಾರ್ಯಕ್ರಮದ ಕುರಿತ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಮೂಲಕ ಪ್ರತೀ ತಿಂಗಳ 3ನೇ ಶನಿವಾರ ರಾಜ್ಯಾದ್ಯಂತ ನಡೆಯುವ ಕಾರ್ಯಕ್ರಮದ ರೂಪು ರೇಷೆಗಳನ್ನು ಉತ್ತಮ ಪಡಿಸಲು ಸಾಧ್ಯವಾಗಲಿದೆ. ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಅದೇ ದಿನ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು.
ಜನರೊಂದಿಗೆ ಭೋಜನ ಸ್ವೀಕರಿಸಿದ ಡಿಸಿ
ಸಾರ್ವಜನಿಕ ಅಹವಾಲು ಸ್ವೀಕಾರದ ನಂತರ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಅಲ್ಲಿ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆಯುವುದರ ಜೊತೆಗೆ ಆಸ್ಪತ್ರೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಅಗತ್ಯ ಕಡತಗಳನ್ನು ನೋಡಿದರು.
ಕಾರ್ಯಕ್ರಮ ಸ್ಥಳದಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿದ್ದ ಸಾಮಾನ್ಯ ಭೋಜನವನ್ನು ಯಾವುದೇ ಆಡಂಬರಕ್ಕೆ ಅವಕಾಶವಿಲ್ಲದಂತೆ ಸಾರ್ವಜನಿಕವಾಗಿಯೇ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ವೀಕರಿಸಿದರು.










