ಕುಡುಬಿಯರ ಕಾಲನಿಗೆ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿ

ನಾಲ್ಕೂರು, ಜ.30: ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ನಂತರ ಕಜ್ಕೆಯಲ್ಲಿರು ಕುಡುಬಿ ಜನಾಂಗದವರ ಕಾಲನಿಯ ಸಿದ್ದನಾಯ್ಕ ಮನೆಗೆ ಭೇಟಿ ನೀಡಿ, ಅಲ್ಲಿ ನೆರೆದ ಕುಡುಬಿ ಜನಾಂಗದ 150ಕ್ಕೂ ಅಧಿಕ ಮಂದಿಯೊಂದಿಗೆ ಸಮಾಲೋಚನೆ ನಡೆಸಿದರು.
ಕುಡುಬಿಯರ ವಿವಿಧ ಸಮಸ್ಯೆಗಳನ್ನು ಆಲಿಸಿ, ಅವರ ಯೋಗಕ್ಷೇಮ ಮತ್ತು ಮಕ್ಕಳ ವಿದ್ಯಾಭ್ಯಾಸ, ನಿವೇಶನದ ಅಗತ್ಯತೆ ಕುರಿತು ಮಾಹಿತಿ ಪಡೆದರು. ಕುಡುಬಿ ಜನಾಂಗದ ಸಾಂಪ್ರದಾಯಿಕ ಕಲೆಯನ್ನು ವೀಕ್ಷಿಸಿ, ಸ್ಥಳೀಯರು ಪ್ರೀತಿಯಿಂದ ನೀಡಿದ ತಾವು ಬೆಳೆಸಿದ ತರಕಾರಿಯನ್ನು ಸ್ವೀಕರಿಸಿದರು.
ಈ ಕಾಲನಿಯ 23 ಎಕರೆ ಭೂಮಿ ಕುಡುಬಿಯರ ಗುರಿಕಾರ ಮೋನಯ್ಯ ನಾಯ್ಕ ಎಂಬವರಿಗೆ ಭೂನ್ಯಾಯ ಮಂಡಳಿ ಮೂಲಕ ಡಿಕ್ರಿಯಾಗಿದ್ದು, ಅಲ್ಲೀಗ 35 ಕುಟುಂಬಗಳ 180ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಈಗ ಅವರೊಳಗೆ ಈ ಭೂಮಿಯನ್ನು ಹಂಚಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಡಿಸಿ, ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ಬ್ರಹ್ಮಾವರದ ತಹಶೀಲ್ದಾರ್ ಅವರಿಗೆ ಸೂಚನೆಗಳನ್ನು ನೀಡಿದರು.
ನಂತರ ಮಾರಾಳಿಯ ದಲಿತ ಕಾಲೋನಿಗೆ ಬೇಟಿ ನೀಡಿ, ಅವರ ಸಮಸ್ಯೆಗಳ ಕುರಿತು ಅಹವಾಲು ಆಲಿಸಿದರು. ನಂತರ ನಂಚಾರಿನ ಸ್ಮಶಾನ ಸ್ಥಳಕ್ಕೆ ಬೇಟಿ ನೀಡಿ, ಅಲ್ಲಿನ ಮೂಲೂತ ಸೌಲ್ಯಗಳ ಕುರಿತು ಪರಿಶೀಲಿಸಿದರು











