ಚಿಕ್ಕಮಗಳೂರು: ಕೃಷಿ ಮಸೂದೆ ಹಿಂಪಡೆಯಲು ಆಗ್ರಹಿಸಿ ರೈತರಿಂದ ಉಪವಾಸ ಸತ್ಯಾಗ್ರಹ
ದಿಲ್ಲಿ ರೈತರ ಚಳವಳಿ ಹತ್ತಿಕ್ಕಲು ಕೇಂದ್ರ ಸರಕಾರದಿಂದ ಸಂಚು: ದುಗ್ಗಪ್ಪಗೌಡ ಆರೋಪ

ಚಿಕ್ಕಮಗಳೂರು, ಜ.30: ಕೇಂದ್ರ ಸರಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವ ಕ್ರಮ ವಿರೋಧಿಸಿ ಹಾಗೂ ದಿಲ್ಲಿಯ ಗಡಿಯಲ್ಲಿ ರೈತರ ಚಳವಳಿಯನ್ನು ಕೇಂದ್ರ ಸರಕಾರ ಪೊಲೀಸರು ಮತ್ತು ತನ್ನ ಕಾರ್ಯಕರ್ತರನ್ನು ಬಳಸಿಕೊಂಡು ಹತ್ತಿಕ್ಕಲು ಸಂಚು ಮಾಡುತ್ತಿದೆ. ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಾ ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸಿದ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದ ಗಾಂಧಿ ಪಾರ್ಕ್ ಆವರಣದಲ್ಲಿ ಶನಿವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಶನಿವಾರ ಬೆಳಗ್ಗೆ ನಗರದ ಗಾಂಧಿ ಪಾರ್ಕ್ ಆವರಣದಲ್ಲಿರುವ ಮಹಾತ್ಮಾ ಗಾಂಧೀಜಿ ಅವರು ಪ್ರತಿಮೆ ಮಾಲಾರ್ಪಣೆ ಮಾಡಿದ ನಂತರ ಹುತಾತ್ಮ ದಿನಾಚರಣೆ ಅಂಗವಾಗಿ 1 ನಿಮಿಷಗಳ ಕಾಲ ಹುತಾತ್ಮರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಕೇಂದ್ರ ಸರಕಾರ ನೂತನ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ ಮುಖಂಡರು ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ವೇಳೆ ಉಪವಾಸ ನಿರತರನ್ನುದ್ದೇಶಿಸಿ ಮಾತನಾಡಿದ ರೈತಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ, ಕೇಂದ್ರದ ಮೋದಿ ಸರಕಾರ ಅಂಬಾನಿ, ಅದಾನಿಯಂತಹ ಶ್ರೀಮಂತ ಬಂಡವಾಳಶಾಹಿಗಳ ಅಣಿತಿಯಂತೆ ಆಡಳಿತ ನಡೆಸುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ಸಂಪೂರ್ಣವಾಗಿ ಅಂಬಾನಿ ಅದಾನಿಗಳಿಗೆ ಶರಣಾಗಿರುವುದರಿಂದ ಅವರ ಸಂಪತ್ತು ವೃದ್ಧಿಗೆ ಪೂರಕವಾಗಿರುವ ಕಾನೂನನ್ನೇ ಜಾರಿ ಮಾಡುತ್ತಾ ದೇಶದ ರೈತರು, ಕಾರ್ಮಿಕರು ಸೇರಿದಂತೆ ಜನಸಾಮಾನ್ಯರ ಬದುಕಿಗೆ ಮಾರಕವಾಗಿರುವ ಆಡಳಿತ ನೀಡುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಸರಕಾರದ ನೂತನ ಕೃಷಿ ಮಸೂದೆಗಳು ಜಾರಿಯಾದಲ್ಲಿ ದೇಶದ ರೈತರು ಖಾಸಗಿಯವರ ದೌರ್ಜನ್ಯಕ್ಕೆ ತುತ್ತಾಗಲಿದ್ದಾರೆ. ಇಂತಹ ಗುಲಾಮಗಿರಿ ಬದುಕು ನಡೆಸಲು ರೈತರು ಸಿದ್ಧರಿಲ್ಲ. ಈ ಕಾರಣಕ್ಕೆ ದೇಶಾದ್ಯಂತ ಈ ಕಾಯ್ದೆಗಳ ಜಾರಿ ವಿರುದ್ಧ ಇಡೀ ರೈತ ಸಮುದಾಯ ಧ್ವನಿ ಎತ್ತಿದೆ. ದಿಲ್ಲಿಯಲ್ಲಿ ಪಂಜಾಬ್, ಹರಿಯಾಣ ರಾಜ್ಯಗಳ ರೈತರು ಕಳೆದ ಎರಡು ತಿಂಗಳುಗಳಿಂದ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಈ ವೇಳೆ 150ಕ್ಕೂ ಹೆಚ್ಚು ರೈತರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಕೇಂದ್ರ ಸರಕಾರ ರೈತರ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು, ದಿಲ್ಲಿಯಲ್ಲಿ ಗಣರಾಜ್ಯೋತ್ಸವದ ದಿನದಂದು ರೈತರು ಶಾಂತಿಯುತವಾಗಿ ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದ ಸಂದರ್ಭ ಕೇಂದ್ರದ ಬಿಜೆಪಿ ಸರಕಾರ ಪೊಲೀಸರು ಹಾಗೂ ಪಕ್ಷದ ಕಾರ್ಯಕರ್ತರನ್ನು ಛೂ ಬಿಟ್ಟು ಹೋರಾಟವನ್ನು ಹತ್ತಿಕ್ಕುವ ಸಂಚು ಮಾಡಿರುವುದು ಈಗಾಗಲೇ ಜಗಜ್ಜಾಹೀರಾಗಿದೆ.
ಆದರೂ ರೈತರನ್ನೇ ದೇಶದ್ರೋಹಿಗಳೆಂದು ಮಾಧ್ಯಮಗಳ ಮೂಲಕ ಬಿಂಬಿಸಲು ಸರಕಾರ ಮುಂದಾಗಿದೆ. ಈ ಘಟನೆಯ ಬಳಿಕವೂ ರೈತರ ಹೋರಾಟ ಮತ್ತಷ್ಟು ಕಟ್ಟಿಗೊಳ್ಳುತ್ತಿರುವುದರಿಂದ ಬೆದರಿರುವ ಸರಕಾರ ಗೂಂಡಾಗಳ ಮೂಲಕ ರೈತರ ಮೇಲೆ ದಾಳಿ ಮಾಡಿಸುತ್ತಿದೆ. ಇಂತಹ ವರ್ತನೆಯನ್ನು ದೇಶದ ರೈತರು, ಪ್ರಜ್ಞಾವಂತರು ಸಹಿಸಲು ಸಾಧ್ಯವಿಲ್ಲ. ಸರಕಾರ ಕೂಡಲೇ ರೈತರ ಪಾಲಿಗೆ ಮರಣ ಶಾಸನವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು. ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ತಪ್ಪಿದಲ್ಲಿ ರೈತರ ಹೋರಾಟ ಮತ್ತಷ್ಟು ಉಗ್ರ ರೂಪಪಡೆಯಲಿದ್ದು, ಮುಂದಾಗುವ ಎಲ್ಲ ಘಟನೆಗಳಿಗೆ ಕೇಂದ್ರ ಸರಕಾರವೇ ಹೊಣೆ ಎಂದು ಎಚ್ಚರಿಸಿದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಸಂಚಾಲಕ ಗೌಸ್ ಮೊಹಿದ್ದೀನ್ ಮಾತನಾಡಿ, ದೇಶದ ಶೇ.80ರಷ್ಟು ಜನರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಈ ಕ್ಷೇತ್ರ ಕೋಟ್ಯಂತರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದು, ವಿಶಿಷ್ಟ ಕೃಷಿ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರದ ಖಜಾನೆಗೆ ತನ್ನದೇಯಾದ ಕೊಡುಗೆ ನೀಡುತ್ತಿದೆ. ಕೇಂದ್ರ ಸರಕಾರ ಇದುವರೆಗೂ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ಕಾರ್ಪೋರೆಟ್ ಶಕ್ತಿಗಳಿಗೆ ಮಾರುತ್ತಿತ್ತು. ಆದರೀಗ ಕೃಷಿ ಕ್ಷೇತ್ರವನ್ನೇ ಕಾರ್ಪೋರೆಟ್ ಶಕ್ತಿಗಳಿಗೆ ಅಡ ಇಡಲು ಮುಂದಾಗಿದೆ ಕೇಂದ್ರದ ಮೋದಿ ಸರಕಾರ ಜನಾಭಿಪ್ರಾಯಕ್ಕೆ ಕಿಮ್ಮತ್ತು ನೀಡದೇ ಸಂಸತ್‍ನಲ್ಲಿ ಚರ್ಚೆಗೂ ಒಳಪಡಿಸದೇ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದರ ಉದ್ದೇಶ ಕಾರ್ಪೋರೆಟ್ ಶಕ್ತಿಗಳ ಹಿತ ಕಾಯುವುದೇ ಆಗಿದೆ. ಕಾಯ್ದೆಯಲ್ಲಿರುವ ಲೋಪದೋಷಗಳನ್ನು ಈಗಾಗಲೇ ರೈತ ಮುಖಂಡರು ಕೇಂದ್ರಕ್ಕೆ ಮನವರಿಕೆ ಮಾಡಿದ್ದಾರೆ. ಆದರೆ ಕೇಂದ್ರ ಸರಕಾರ ಕೆಲ ಬದಲಾವಣೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದೆಯೇ ಹೊರತು ಯಾವುದೇ ಬದಲಾವಣೆ ಮಾಡಿಲ್ಲ. ಈ ಭರವಸೆಗಳು ರೈತರ ಹೋರಾಟ ಹತ್ತಿಕ್ಕುವ ಸಂಚಾಗಿದೆ ಎಂದರು.
ಧರಣಿ ಸಂದರ್ಭ ದಿಲ್ಲಿ ರೈತರ ಹೋರಾಟ ಬೆಂಬಲಿಸಿ ಹಾಗೂ ಕೇಂದ್ರ ಸರಕಾರ ತನ್ನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಮುಖಂಡರು ಬೆಳಗ್ಗೆಯಿಂದ ಸಂಜೆ 5ರವರೆಗೆ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು. ರೈತಸಂಘದ ಕೃಷ್ಣೇಗೌಡ, ನಿರಂಜನ್ ಮೂರ್ತಿ, ರಾಜಪ್ಪ, ಉಗ್ಗೇಗೌಡ, ಉಮೇಶ್, ಕರವೇ ಮೂಡಿಗೆರೆ ತಾಲೂಕು ಅಧ್ಯಕ್ಷ ಪ್ರಸನ್ನ, ಸಂವಿಧಾನ ಸಂರಕ್ಷಣಾ ಸಮಿತಿಯ ಕೃಷ್ಣಮೂರ್ತಿ, ಆಪ್ ಪಕ್ಷದ ಡಾ. ಸುಂದರ್ ಗೌಡ, ದಸಂಸ ಮುಖಂಡ ಗಣೇಶ್, ಇಲಿಯಾಸ್ ಅಹ್ಮದ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕೃಷಿ ಕಾಯ್ದೆಗಳು ರೈತ ಪರ ಎಂದು ಕೇಂದ್ರ ಸರಕಾರ ಪದೇ ಪದೇ ಹೇಳುತ್ತಿದೆ. ಈ ಕಾಯ್ದೆಗಳು ರೈತ ಪರವಾಗಿದ್ದರೇ ಎಂಎಸ್‍ಪಿಗೆ ಕಾನೂನಿನ ಸ್ವರೂಪ ಏಕೆ ನೀಡಿಲ್ಲ?, ಎಪಿಎಂಸಿ ಮೇಲೆ ಖಾಸಗಿಯವರ ಹಿಡಿತ ಇರುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಏನೆಂಬುದನ್ನು ಸರಕಾರ ಎಲ್ಲೂ ಹೇಳಿಲ್ಲವೇಕೆ?, ಕಾಯ್ದೆಗಳು ರೈತ ಪರ ಎನ್ನುವುದೇ ಸತ್ಯವಾಗಿದ್ದರೇ ಕೇಂದ್ರ ಸರಕಾರ ರೈತರ ಪ್ರತಿಭಟನೆ ಬಳಿಕ ಕಾಯ್ದೆಗೆ ತಿದ್ದುಪಡಿ ಮಾಡುತ್ತೇವೆ ಎನ್ನುತ್ತಿರುವುದಾದರೂ ಏಕೆ? ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗಿಯವರ ಹಿಡಿತಕ್ಕೆ ಒಪ್ಪಿಸುವುದೇ ಈ ಕಾಯ್ದೆಗಳ ಉದ್ದೇಶವಾಗಿದ್ದು, ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನವಾಗಿವೆ.
- ದುಗ್ಗಪ್ಪಗೌಡ







