ನೊಬೆಲ್ ಶಾಂತಿ ಪ್ರಶಸ್ತಿಗೆ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಶಿಫಾರಸು

ಓಸ್ಲೊ (ನಾರ್ವೆ), ಜ. 30: ನಿರಾಯುಧ ಕರಿಯ ವ್ಯಕ್ತಿಯೊಬ್ಬನನ್ನು ಅಮೆರಿಕ ಪೊಲೀಸರು ಕೊಂದ ಬಳಿಕ ರೂಪುಗೊಂಡಿರುವ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ (ಕರಿಯರ ಜೀವಗಳಿಗೂ ಬೆಲೆಯಿದೆ) ಚಳವಳಿಯನ್ನು ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ ಎಂದು ನಾರ್ವೆಯ ಸಂಸದ ಪೀಟರ್ ಏಡ್ ಶನಿವಾರ ಹೇಳಿದ್ದಾರೆ.
2013ರಲ್ಲಿ ಅಮೆರಿಕದಲ್ಲಿ ರೂಪುಗೊಂಡ ಚಳವಳಿಯು, ಕಳೆದ ವರ್ಷದ ಮೇ ತಿಂಗಳಲ್ಲಿ ಅಮೆರಿಕದ ಮಿನಪೊಲಿಸ್ ಪೊಲೀಸರು ಜಾರ್ಜ್ ಫ್ಲಾಯ್ಡಾ್ ಎಂಬ ಕರಿಯ ವ್ಯಕ್ತಿಯನ್ನು ಕುತ್ತಿಗೆಯ ಮೇಲೆ ಮಂಡಿಯಿಟ್ಟು ಉಸಿರುಗಟ್ಟಿಸಿ ಕೊಂದ ಬಳಿಕ ಪ್ರಬಲವಾಗಿ ಬೆಳೆಯಿತು.
‘‘ಈ ಚಳವಳಿಯು ಜನಾಂಗೀಯ ತಾರತಮ್ಯದ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಬಲ ಜಾಗತಿಕ ಚಳವಳಿಯಾಗಿ ಹೊರಹೊಮ್ಮಿದೆ’’ ಎಂದು ಈ ಚಳವಳಿಯನ್ನು ಶಾಂತಿ ಪ್ರಶಸ್ತಿಗಾಗಿ ಶಿಫಾರಸು ಮಾಡಿದ ಪೀಟರ್ ಏಡ್ ಹೇಳಿದರು.
ಐರೋಪ್ಯ ಒಕ್ಕೂಟೇತರ ದೇಶಗಳಿಗೆ ಗಡಿ ಮುಚ್ಚಿದ ಫ್ರಾನ್ಸ್
ಪ್ಯಾರಿಸ್ (ಫ್ರಾನ್ಸ್), ಜ. 30: ಅಗತ್ಯ ಪ್ರಯಾಣಗಳನ್ನು ಹೊರತುಪಡಿಸಿ ಐರೋಪ್ಯ ಒಕ್ಕೂಟೇತರ ದೇಶಗಳ ಪ್ರಜೆಗಳಿಗೆ ಫ್ರಾನ್ಸ್ ತನ್ನ ಗಡಿಗಳನ್ನು ಮುಚ್ಚಲಿದೆ ಎಂದು ದೇಶದ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಶುಕ್ರವಾರ ಹೇಳಿದರು. ಅದೇ ವೇಳೆ, ದೇಶದಲ್ಲಿ ಮೂರನೇ ಲಾಕ್‌ಡೌನ್ ವಿಧಿಸುವುದರಿಂದ ಅದು ಹಿಂದೆ ಸರಿದಿದೆ.
ರೂಪಾಂತರಿತ ಕೊರೋನ ವೈರಸ್ ಪ್ರಭೇದದ ಸೋಂಕು ಇತರ ದೇಶಗಳಿಂದ ಹರಡುವುದನ್ನು ತಡೆಯುವ ಉದ್ದೇಶದಿಂದ ವಿಧಿಸಲಾಗಿರುವ ಪ್ರಯಾಣ ನಿರ್ಬಂಧವು ರವಿವಾರ ಜಾರಿಗೆ ಬರಲಿದೆ.







