ರೈಲು ಬಂದ್‍ಗೆ ಮುಂದಾದ ಮುಖಂಡರ ಬಂಧನ
ಬೆಂಗಳೂರು, ಜ.30: ಮರಾಠ ಅಭಿವೃದ್ದಿ ನಿಗಮ ರದ್ದುಗೊಳಿಸಬೇಕು. ಜತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆ ನಿಲ್ಲಿಸುವಂತೆ ಒತ್ತಾಯಿಸಿ ರೈಲು ತಡೆ ಚಳುವಳಿ ನಡೆಸಿದ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.
ಶನಿವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಒಕ್ಕೂಟದ ನೇತೃತ್ವದಲ್ಲಿ ರೈಲು ಬಂದ್ ನಡೆಸಲು ಮುಂದಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸೇರಿದಂತೆ ಅನೇಕ ಮುಖಂಡರನ್ನು ಪೊಲೀಸರು ಬಂಧಿಸಿ, ವಾಹನದಲ್ಲಿ ಕರೆದೊಯ್ದುರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಮಹಾರಾಷ್ಟ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಜೊತೆಯಲ್ಲಿ ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧ ಮಾಡಬೇಕು. ಅದೇ ರೀತಿ, ಮಹಾರಾಷ್ಟ್ರ ಅಭಿವೃದ್ಧಿ ನಿಗಮವನ್ನು ಕೂಡಲೇ ರದ್ದು ಮಾಡಬೇಕೆಂದು ಆಗ್ರಹಿಸಿದರು.
ಫೆಬ್ರವರಿ 20ರಂದು ಎಲ್ಲಾ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿಗೆ ಮುತ್ತಿಗೆ ಹಾಕಲಿದ್ದೇವೆ. ಮರಾಠಿ ನಾಮಫಲಕಗಳನ್ನು ತೆರವುಗೊಳಿಸಲಿದ್ದೇವೆ ಎಂದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹುಚ್ಚತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗಡಿ ಬಗ್ಗೆ ಇವರ ಎಲ್ಲ ಹೇಳಿಕೆಗಳನ್ನು ಸಾರಾಸಗಟಾಗಿ ಖಂಡಿಸುತ್ತೇವೆ ಎಂದರು.
ಸಾ.ರಾ.ಗೋವಿಂದು ಮಾತನಾಡಿ, ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ. ಎಂಇಎಸ್, ಶಿವಸೇನೆಯವರಿಗೆ ತಕ್ಕ ಉತ್ತರ ಕೊಡುವ ಶಕ್ತಿ ಕನ್ನಡಪರ ಹೋರಾಟಗಾರರಿಗೆ ಇದೆ. ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿದ ಹಿನ್ನೆಲೆಯಲ್ಲಿ ಮರಾಠಿಗರ ಉಪಟಳ ರಾಜ್ಯದಲ್ಲಿ ಹೆಚ್ಚಾಗಿದೆ. ಇದನ್ನು ಕೂಡಲೇ ಸರಕಾರ ರದ್ದುಗೊಳಿಸುವಂತೆ ಆಗ್ರಹಿಸಿದರು.







