ಕೊರೋನ ಲಸಿಕೆ ಪಡೆದವರು ಮೃತಪಟ್ಟ ಪ್ರಕರಣ: ಸಾವಿನ ಕಾರಣಗಳ ಮರು ಪರೀಕ್ಷೆಗೆ ನಿರ್ಧಾರ

ಹೊಸದಿಲ್ಲಿ, ಜ.30: ಕೊರೋನ ಲಸಿಕೆ ಪಡೆದ ಕೂಡಲೇ ಮೃತಪಟ್ಟ ವ್ಯಕ್ತಿಗಳ ಸಾವಿಗೆ ಕಾರಣಗಳ ಬಗ್ಗೆ ಮರು ಪರೀಕ್ಷೆ ನಡೆಸಲು ರಾಷ್ಟ್ರೀಯ ಎಇಎಫ್‌ಐ ಸಮಿತಿ ನಿರ್ಧರಿಸಿದೆ. ಈ ರೀತಿಯ ಮರಣ ಪ್ರಕರಣಗಳ ಕುರಿತು ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆಯುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಮಿತಿ ತಿಳಿಸಿದೆ.
ಬಹುತೇಕ ಪ್ರಕರಣಗಳಲ್ಲಿ ಸಾವಿನ ನಿಖರ ಕಾರಣ ಕಂಡುಕೊಳ್ಳಲು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ‘ಲಸಿಕೆ ಪಡೆದ ನಂತರದ ಪ್ರತಿಕೂಲ ಪರೀಕ್ಷೆ ’(ಎಇಎಫ್‌ಐ) ಸಮಿತಿಯ ಸಲಹೆಗಾರ ಎನ್.ಕೆ. ಅರೋರಾ ಹೇಳಿರುವುದಾಗಿ ವರದಿಯಾಗಿದೆ. ಲಸಿಕೆ ಪಡೆದ ಬಳಿಕ ವರದಿಯಾಗುವ ಪ್ರತಿಕೂಲ ಘಟನೆಗಳ ಬಗ್ಗೆ ನಿಗಾ ವಹಿಸಲು ಕೇಂದ್ರ ಸರಕಾರ ಎಇಎಫ್‌ಐ ಸಮಿತಿ ರಚಿಸಿದೆ. ಯಾವುದೇ ಸಾವು ಕೊರೋನ ಲಸಿಕೆಗೆ ಸಂಬಂಧಿಸಿದ್ದಲ್ಲ ಎಂದು ಪ್ರಾಥಮಿಕ ಮಾಹಿತಿಯಿಂದ ಕಂಡುಬಂದಿದೆ.
ಈಗ ಮತ್ತೊಮ್ಮೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಕ್ರಮದಂತೆ ವೈಜ್ಞಾನಿಕ ಮತ್ತು ಪಾರದರ್ಶಕ ರೀತಿಯಲ್ಲಿ ಸಾವಿನ ಕಾರಣವನ್ನು ಪರಿಶೀಲಿಸಲಾಗುತ್ತದೆ. ರಾಷ್ಟ್ರೀಯ ಎಇಎಫ್‌ಐ ಸಮಿತಿಯ ಸಾಂದರ್ಭಿಕ ಪರಿಶೀಲನೆಯ ವರದಿಯನ್ನು ಸಾರ್ವಜನಿಕರ ಮಾಹಿತಿಗೆ ಒದಗಿಸಲಾಗುವುದು ಎಂದು ಅರೋರಾ ಹೇಳಿದ್ದಾರೆ. ಕೊರೋನ ಲಸಿಕೆ ಅಭಿಯಾನದಲ್ಲಿ ದೇಶದಲ್ಲಿ ಇದುವರೆಗೆ 28 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದ್ದು ಲಸಿಕೆ ಪಡೆದ 1ರಿಂದ 5 ದಿನದೊಳಗೆ 10 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ಆರೋಗ್ಯ ಕಾರ್ಯಕರ್ತರು 25ರಿಂದ 56 ವರ್ಷದ ಪ್ರಾಯದವರಾಗಿದ್ದಾರೆ. ಕರ್ನಾಟಕ, ಉ.ಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ತೆಲಂಗಾಣ, ಹರ್ಯಾಣ ಮತ್ತು ಒಡಿಶಾದಲ್ಲಿ ಸಾವಿನ ಪ್ರಕರಣ ವರದಿಯಾಗಿದೆ. ಆದರೆ ಈ ಎಲ್ಲಾ ಪ್ರಕರಣಗಳಲ್ಲೂ ಲಸಿಕೆ ಪಡೆದಿರುವುದು ಸಾವಿಗೆ ಕಾರಣವಲ್ಲ ಎಂದು ಜಿಲ್ಲಾ ಎಇಎಫ್‌ಐ ಸಮಿತಿ ವರದಿ ನೀಡಿದೆ.







