‘ಚಿಕ್‌ಕಿಂಗ್’ ಸಂಸ್ಥೆಯ ಆಹಾರದಲ್ಲಿ ಜೀವಂತ ಹುಳು ! : ಆಹಾರ ಖಾದ್ಯ ಪಾರ್ಸೆಲ್ ಪಡೆದು ಆತಂಕಕ್ಕೀಡಾದ ಗ್ರಾಹಕರು
ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮಂಗಳೂರು, ಜ.30: ನಗರದ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಕಾರ್ಯಾಚರಿಸುವ ‘ಚಿಕ್‌ಕಿಂಗ್ ಇಟ್ಸ್ ಮೈ ಚಾಯಿಸ್’ ಸಂಸ್ಥೆಯಿಂದ ಆಹಾರ ಖಾದ್ಯ ಪಾರ್ಸೆಲ್ ಪಡೆದ ಮಹಿಳೆಯೊಬ್ಬರು ಆಘಾತಕ್ಕೊಳಗಾಗಿದ್ದಾರೆ. ಪಾರ್ಸೆಲ್ ತರಿಸಿದ ಆಹಾರದಲ್ಲಿ ಜೀವಂತ ಹುಳು ಹರಿದಾಡಿದೆ ಎಂದು ಆರೋಪಿಸಿ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಲೇಡಿಹಿಲ್‌ನ ಸಲ್ಮಾ ಸಿಮ್ರನ್ ಕೆ. ಎಂಬವರು ಶನಿವಾರ ಸಂಜೆ 7:30ರ ಸುಮಾರಿಗೆ ‘ಚಿಕ್‌ಕಿಂಗ್’ ಸಂಸ್ಥೆಯಿಂದ ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸೆಲ್‌ಗೆ ಆರ್ಡರ್ ಮಾಡಿದ್ದರು. ಬಳಿಕ ರಾತ್ರಿ 8 ಗಂಟೆ ಸುಮಾರಿಗೆ ಪಾರ್ಸೆಲ್ ಮನೆ ಬಾಗಿಲಿಗೆ ಬಂದಿದೆ. ನಂತರ ಸಲ್ಮಾ ಸಹಿತ ತಾಯಿ, ಮಕ್ಕಳು ಅದೇ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದ್ದಾರೆ. ಈ ನಡುವೆ ಚಿಕನ್ ಖಾದ್ಯದಲ್ಲಿ ದಿಢೀರ್ ಹುಳ ಕಾಣಿಸಿಕೊಂಡಿದ್ದು, ಕುಟುಂಬವೇ ಆತಂಕ್ಕೀಡಾಗಿದ್ದು, ಸಲ್ಮಾ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ ಜೊತೆ ಮಾತನಾಡಿದ ಸಲ್ಮಾ, ‘ಸಂಜೆ ವೇಳೆ ‘ಚಿಕ್‌ಕಿಂಗ್’ ಆಹಾರೋತ್ಪನ್ನ ಸಂಸ್ಥೆಗೆ ಚಿಕನ್ ಸಹಿತ ಬರ್ಗರ್ ಆರ್ಡರ್ ಮಾಡಿದೆವು. ತಾಯಿ, ಮಕ್ಕಳೊಂದಿಗೆ ಖಾದ್ಯ ಸೇವಿಸುತ್ತಿದೆವು. ಅದೇ ವೇಳೆ ಆಹಾರದಲ್ಲಿ ಜೀವಂತ ಹುಳು ಓಡಾಡುತ್ತಿತ್ತು. ಇದರಿಂದ ತುಂಬ ಗಾಬರಿಯಾದೆವು. ಶುದ್ಧ ಆಹಾರ ಸಿಗುತ್ತದೆ ಎಂದು ಆಹಾರ ಖರೀದಿಸಲು ಮುಂದಾದರೆ, ಸಂಸ್ಥೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದೆ. ಸಂಸ್ಥೆಯವರನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿಯೂ ವಿಫಲರಾದೆವು. ಆಹಾರ ಪೂರೈಕೆ ಸಂಸ್ಥೆಯವರು ಆಹಾರ ಪೊಟ್ಟಣ ಕಟ್ಟುವಾಗಲೇ ಸರಿಯಾಗಿ ನೋಡಬೇಕಿತ್ತು. ಏನಾದರೂ ಅವಘಡ ಸಂಭವಿಸಿದ್ದರೆ ಯಾರೂ ಜವಾಬ್ದಾರಿ’ ಎಂದು ಅವರು ಪ್ರಶ್ನಿಸಿದರು.
‘ಒಟ್ಟು ಆರು ಬರ್ಗರ್‌ಗಳನ್ನು ಪಾರ್ಸೆಲ್ ತರಿಸಿದ್ದೆವು. ಅದರಲ್ಲಿ ತಾಯಿ ಹಾಗೂ ಮಕ್ಕಳು ನಾಲ್ಕನ್ನು ಸೇವಿಸಿದ್ದರು. ಸಹೋದರಿ ಹಾಗೂ ತನಗೆಂದು ಎರಡು ಬರ್ಗರ್ ಉಳಿಸಿದ್ದೆವು. ತನ್ನ ಪಾಲಿನ ಬರ್ಗರ್‌ನ ಪಾರ್ಸೆಲ್ ತೆರೆಯುತ್ತಿದ್ದಂತೆ ಜೀವಂತ ಹುಳು ಕಾಣಿಸಿತು. ಇದು ಆರೋಗ್ಯದ ವಿಚಾರವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸಲ್ಮಾ ಆಗ್ರಹಿಸಿದ್ದಾರೆ.
''ಚಿಕನ್ ಖಾದ್ಯಗಳನ್ನು ಸುಮಾರು 163 ಡಿಗ್ರಿ ಟೆಂಪರೇಚರ್‌ನಲ್ಲಿ ತಯಾರಿಸಲಾಗುತ್ತದೆ. ಇಂತಹ ಖಾದ್ಯದಲ್ಲಿ ಜೀವಂತ ಹುಳು ಕಂಡುಬರುವ ಸಾಧ್ಯತೆಯೇ ಇಲ್ಲ. ಎಲ್ಲವನ್ನು ಸ್ವಚ್ಛಗೊಳಿಸಿಯೇ ಆಹಾರ ಪ್ಯಾಕ್ ಮಾಡಲಾಗುತ್ತದೆ. ಇಂತಹ ಆರೋಪಗಳು ಇಲ್ಲಿಯವರೆಗೂ ಸಂಸ್ಥೆಯ ವಿರುದ್ಧ ಕೇಳಿ ಬಂದಿಲ್ಲ. ಆದಾಗ್ಯೂ, ಪಾರ್ಸೆಲ್ ಮಾಡಿದ ಆಹಾರಕ್ಕೆ ಪ್ರತಿಯಾಗಿ ಬೇರೆ ಆಹಾರ ನೀಡುವುದರ ಜೊತೆಗೆ, ಹಣವನ್ನು ಸಂಸ್ಥೆ ಮರುಪಾವತಿಸಲಿದೆ. ಈ ಬಗ್ಗೆ ರವಿವಾರ ಮಹಿಳೆ ಜೊತೆ ಮಾತುಕತೆ ನಡೆಸಿ, ಪರಿಹಾರ ಕಂಡುಕೊಳ್ಳಲಿದ್ದೇವೆ.
- ಕೇಶವ್ ದಾಸ್, ವ್ಯವಸ್ಥಾಪಕ,
ಚಿಕ್‌ಕಿಂಗ್ ಇಟ್ಸ್ ಮೈ ಚಾಯಿಸ್







