ಸದಾ ಅನ್ಯಾಯಕ್ಕೊಳಗಾದ ಉತ್ತರ ಕರ್ನಾಟಕ ಜನತೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆಯಿಟ್ಟರೆ ಆಶ್ಚರ್ಯವಿಲ್ಲ: ಪ್ರಭಾಕರ ಕೋರೆ
ಬೆಳಗಾವಿ, ಜ.30: ಎಲ್ಲ ಕ್ಷೇತ್ರಗಳಲ್ಲೂ ಸದಾ ಅನ್ಯಾಯಕ್ಕೊಳಗಾಗುತ್ತಿರುವ ಉತ್ತರ ಕರ್ನಾಟಕ ಜನತೆ ಮುದೊಂದು ದಿನ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟರೆ ಆಶ್ಚರ್ಯವಿಲ್ಲವೆಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದ್ದಾರೆ.
ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಇಲ್ಲಿನ ಮಲ್ಲಿಕಾರ್ಜುನ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡಿಗರು ಭೌಗೋಳಿಕವಾಗಿ ಒಂದಾದರೆ ಸಾಲದು, ಭಾವನಾತ್ಮಕವಾಗಿ ಒಂದಾಗಬೇಕೆಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಇಲ್ಲಿಯವರೆಗೂ ಏಕೀಕರಣದ ಒಟ್ಟು ಆಶಯ ಈಡೇರಿಲ್ಲ. ಗಡಿ ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸಿ, ಅಲ್ಲಿ ಕನ್ನಡ ವಾತಾವರಣ ನಿರ್ಮಿಸಲು ಪ್ರಬಲ ಇಚ್ಛಾಶಕ್ತಿಯನ್ನು ರಾಜ್ಯ ಸರಕಾರ ತೋರಬೇಕಿದೆ ಎಂದು ಅವರು ಆಶಿಸಿದ್ದಾರೆ.
ಪ್ರಾದೇಶಿಕ ಅಸಮತೋಲನ ಎಲ್ಲ ಕ್ಷೇತ್ರಗಳಲ್ಲೂ ಎದ್ದು ಕಾಣುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಬಂದಷ್ಟು ನೀರಾವರಿ ಯೋಜನೆಗಳು ಉತ್ತರದಲ್ಲಿ ಬಂದಿಲ್ಲ. ಸರಕಾರಿ ಶಾಲೆ, ಕಾಲೇಜು ಹಾಗೂ ಉದ್ಯಮಗಳ ವಿಷಯದಲ್ಲೂ ಉತ್ತರ ಕರ್ನಾಟಕದ ಭಾಗಕ್ಕೆ ಅನ್ಯಾಯವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ, ಪ್ರಶಸ್ತಿಗಳು ಬೆಂಗಳೂರಿನ ಕಲಾವಿದರು ಹಾಗೂ ಸಾಹಿತಿಗಳಿಗೇ ಮಾತ್ರ ಮೀಸಲಾಗಿವೆ. ಅಕಾಡೆಮಿಗಳಲ್ಲಿ ಉತ್ತರ ಕರ್ನಾಟಕದವರಿಗೆ ಸ್ಥಾನಮಾನಗಳೆ ಸಿಕ್ಕಿಲ್ಲ. ಇವೆಲ್ಲ ಅಂಶಗಳ ಬಗ್ಗೆ ಗಂಭೀರವಾಗಿ ಆಲೋಚಿಸಿ ಸರಿಪಡಿಸಿಕೊಳ್ಳಬೇಕಿದೆ.
ಪ್ರಭಾಕರ ಕೋರೆ, ಕೆಎಲ್‍ಇ, ಕಾರ್ಯಾಧ್ಯಕ್ಷ







