ದೇಶದ ಮೂರನೇ ಎರಡರಷ್ಟು ಸಕ್ರಿಯ ಕೋವಿಡ್ ಪ್ರಕರಣಗಳು ಈ ಎರಡು ರಾಜ್ಯಗಳಲ್ಲಿ...

ಹೊಸದಿಲ್ಲಿ, ಜ.31: ದೇಶದಲ್ಲಿ ಶನಿವಾರ 13 ಸಾವಿರ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಸದ್ಯ ಇರುವ ಸಕ್ರಿಯ ಕೋವಿಡ್-19 ಪ್ರಕರಣಗಳ ಪೈಕಿ ಮೂರನೇ ಎರಡರಷ್ಟು ಪ್ರಕರಣಗಳು ಕೇರಳ ಹಾಗೂ ಮಹಾರಾಷ್ಟ್ರದಲ್ಲಿವೆ.
ದೇಶದ ಬಹುತೇಕ ಕಡೆಗಳಲ್ಲಿ ಸೋಂಕು ಇಳಿಮುಖವಾಗುತ್ತಿದ್ದು, ಕಳೆದ ವಾರಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದಾಗಿ ಶನಿವಾರ ಮೃತಪಟ್ಟವರು 129 ಮಂದಿ.
ದಿಲ್ಲಿಯಲ್ಲಿ 183 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಶನಿವಾರ ಎಂಟು ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 10,849ಕ್ಕೇರಿದೆ.
ಈ ನಡುವೆ ಸರಕಾರ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ಮುಂದುವರಿಸಿದ್ದು, ಕಳೆದ ಎರಡು ದಿನಗಳಲ್ಲಿ 5.7 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಗುರುವಾರ ಹಾಗೂ ಶುಕ್ರವಾರ 10 ಸಾವಿರಕ್ಕೂ ಹೆಚ್ಚು ಲಸಿಕೆ ನೀಡಿಕೆ ಸೆಷನ್‌ಗಳನ್ನು ಆಯೋಜಿಸಲಾಗಿತ್ತು ಎಂದು ಅಧಿಕೃತ ಮೂಲಗಳು ಹೇಳಿವೆ.
ದೇಶದಲ್ಲಿ ಇದುವರೆಗೆ 37 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ. ದೇಶದಲ್ಲಿ 15 ದಿನಗಳ ಹಿಂದೆ ಲಸಿಕೆ ನೀಡಿಕೆ ಕಾರ್ಯಕ್ರಮ ಆರಂಭವಾಗಿತ್ತು.







