'ಸ್ವರ ಕುಡ್ಲ ಸೀಸನ್-3' ಸಂಗೀತ ಸ್ಪರ್ಧೆಯ ಧ್ವನಿಪರೀಕ್ಷಾ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು, ಜ.31: ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಮತ್ತು ಉಡುಪಿ ಜಿಲ್ಲೆ ಇದರ 13ನೇ ವಾರ್ಷಿಕೋತ್ಸವದ ಅಂಗವಾಗಿ ‘ಸ್ವರ ಕುಡ್ಲ ಸೀಸನ್-3’ ಸಂಗೀತ ಸ್ಪರ್ಧೆಯ ಧ್ವನಿಪರೀಕ್ಷಾ ಕಾರ್ಯಕ್ರಮ ನಗರದ ಕಾರ್‌ಸ್ಟ್ರೀಟ್‌ನ ಬಿಇಎಂ ಶಾಲಾ ಸಭಾಂಗಣದಲ್ಲಿ ರವಿವಾರ ಬೆಳಗ್ಗೆ ಆರಂಭಗೊಂಡಿತು.
ಕಾರ್ಯಕ್ರಮಕ್ಕೆ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ರಾಷ್ಟ್ರೀಯ ಘಟಕದ ಮಾಜಿ ಉಪಾಧ್ಯಕ್ಷ ವಿಜಯ್ ವಿಷ್ಣು ಮಯ್ಯ ದೀಪ ಬೆಳಗಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸಂಗೀತ ಜೀವನ ಶೈಲಿ ನಿದರ್ಶನ ಆಗಿರಬೇಕು. ಮನಸಿಗೆ ನಿರಾಳತೆ, ಶಾಂತಿ ನೀಡಲು ಸಂಗೀತ ಅಗತ್ಯ. ಸಂಗೀತದ ಒಕ್ಕೂಟ, ಸಂಘ ಸಂಸ್ಥೆಗಳು ಸಮಾಜಕ್ಕೆ ಅತ್ಯಗತ್ಯ. ಸ್ಪರ್ಧಿಗಳಿಗೆ ಇದು ಸಂಗೀತ ಜೀವನದ ಕೊನೆಯಲ್ಲ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜ. ಸಂಗೀತದಿಂದ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದರು.
ಡಿವೈಎಸ್ಪಿ ಬಂಟ್ವಾಳ ವೆಲಂಟೈನ್ ಡಿಸೋಜ ಮಾತನಾಡಿ, ಯಾವುದೇ ಸಾಧನೆಗೂ ಸಂಗೀತ ಬೇಕು. ಇದೊಂದು ರಾಷ್ಟ್ರೀಯ ಭಾವೈಕ್ಯದ ಸ್ಪರ್ಧೆಯಾಗಿದೆ. ಪ್ರತಿಭಾನ್ವಿತ ಕಲಾವಿದರು ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ವ್ಯಕಪಡಿಸಬೇಕು. ಪ್ರಯತ್ನವೊಂದಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಕಲಾವಿದರಿಗೆ ಅದ್ಭುತ ಭವಿಷ್ಯವಿದೆ ಎಂದರು.
ಬಿಇಎಂ ಎಜುಕೇಶನ್ ಇನ್‌ಸ್ಟಿಟ್ಯೂಷನ್‌ನ ಸಂಚಾಲಕ ರೋಹನ್ ಶಿರಿ, ಬರ್ಕೆ ಪೋಲಿಸ್ ಠಾಣೆ ವೃತ್ತ ನಿರೀಕ್ಷಕ ಹಾಗೂ ಖ್ಯಾತ ಜಾನಪದ ಕಲಾವಿದ ಜ್ಯೋರ್ತಿಲಿಂಗ ಹೊನಕಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಝೀನತ್ ಸಂಶುದ್ದೀನ್ ಹಾಗೂ ಜಯಶ್ರೀ ಕುಡ್ವ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್, ಮಾಜಿ ಅಧ್ಯಕ್ಷ ಮುರಳೀಧರ್ ಕಾಮತ್, ಸ್ಥಾಪಕಾಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ, ಉಪಾಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಖಜಾಂಚಿ ಐವನ್ ಡಿಸೋಜ, ಕಾರ್ಯದರ್ಶಿ ರಮೇಶ್ ಸಾಲ್ಯಾನ್, ಪದಾಧಿಕಾರಿಗಳಾದ ರಂಜನ್ ದಾಸ್, ಜಗದೀಶ್ ಶೆಟ್ಟಿ, ಗಣೇಶ್, ಸತೀಶ್ ಸುರತ್ಕಲ್, ದಾಮೋದರ್ ಮತ್ತಿತರರು ಉಪಸ್ಥಿತರಿದ್ದರು.
ಜ್ಯೋತಿ ಚಂದ್ರಶೇಖರ್ ಪ್ರಾರ್ಥಿಸಿದರು. ಪುಷ್ಕಲ್‌ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸ್ವರ ಕುಡ್ಲ ಸೀಸನ್-3 ಸಂಗೀತ ಸ್ಪರ್ಧೆಯಲ್ಲಿ ಸುಮಾರು 100ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.
ಪ್ರಕಾಶ್ ಮಹಾದೇವನ್, ದಿನೇಶ್ ಕಿನ್ನಿಗೋಳಿ, ಶಿನೊಯ್ ಬಿ. ಜೋಸೆಫ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.








