ತ್ರಿವರ್ಣ ಧ್ವಜಕ್ಕೆ ಮಾಡಿರುವ ಅವಮಾನದಿಂದ ದೇಶಕ್ಕೆ ನೋವಾಗಿದೆ: ಪ್ರಧಾನಿ ಮೋದಿ

ಹೊಸದಿಲ್ಲಿ, ಜ.31: ಜನವರಿ 26ರಂದು ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆದ ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭ ಕೆಲವು ಪ್ರತಿಭಟನಾಕಾರರಿಂದ ತ್ರಿವರ್ಣಧ್ವಜಕ್ಕೆ ಆದ ಅಪಮಾನದಿಂದ ಇಡೀ ದೇಶಕ್ಕೆ ಆಘಾತ ಮತ್ತು ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ಕಿ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನವರಿ 23ರಂದು ದೇಶವು ನೇತಾಜಿ ಸುಭಾಷ್ಚಂದ್ರ ಬೋಸರ ಜನ್ಮದಿನಾಚರಣೆಯನ್ನು ‘ಪರಾಕ್ರಮ ದಿವಸ’ವಾಗಿ ಆಚರಿಸಿದೆ. ಜನವರಿ 26ರಂದು ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಅದ್ಭುತ ಪಥಸಂಚಲನವನ್ನು ನಾವೆಲ್ಲಾ ವೀಕ್ಷಿಸಿದ್ದೇವೆ. ಇದರ ಮಧ್ಯೆ, ಜನವರಿ 26ರಂದು ದೇಶದ ರಾಷ್ಟ್ರಧ್ವಜಕ್ಕೆ ಕೆಲವರಿಂದ ಆದ ಅವಮಾನಕ್ಕೆ ಇಡೀ ದೇಶವೇ ಸಾಕ್ಷಿಯಾಯಿತು ಎಂದರು.
ಕಳೆದ ವರ್ಷ ದೇಶದ ಪ್ರಜೆಗಳು ಅಸಾಧಾರಣ ಸಂಯಮ ಮತ್ತು ಧೈರ್ಯ ಪ್ರದರ್ಶಿಸಿದ್ದಾರೆ. ಈ ವರ್ಷವೂ ಕಠಿಣ ದುಡಿಮೆಯ ಮೂಲಕ ನಮ್ಮ ದೃಢನಿರ್ಧಾರವನ್ನು ಸಾಬೀತುಪಡಿಸಬೇಕಿದೆ. ಜನತೆ ಭವಿಷ್ಯವನ್ನು ಹೊಸ ನಿರೀಕ್ಷೆ ಮತ್ತು ಹೊಸತನದೊಂದಿಗೆ ತುಂಬಬೇಕು. ಕೃಷಿ ಕ್ಷೇತ್ರದ ಆಧುನೀಕರಣಕ್ಕೆ ತಮ್ಮ ಸರಕಾರ ಬದ್ಧವಾಗಿದ್ದು ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೋದಿ ಹೇಳಿದ್ದಾರೆ. ಕೊರೋನ ವಿರುದ್ಧದ ಲಸಿಕಾ ಅಭಿಯಾನವನ್ನು ಪ್ರಸ್ತಾವಿಸಿದ ಅವರು, ಔಷಧ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ವಿಶ್ವಕ್ಕೆ ನೆರವಾಗುತ್ತಿದೆ. ವಿಶ್ವದ ಅತ್ಯಂತ ಬೃಹತ್ ಲಸಿಕಾ ಅಭಿಯಾನ ನಡೆಸುವುದಷ್ಟೇ ಅಲ್ಲ, ದೇಶದ ಪ್ರಜೆಗಳಿಗೆ ಅತ್ಯಂತ ಕ್ಷಿಪ್ರವಾಗಿ ಲಸಿಕೆ ನೀಡಲಾಗುತ್ತಿದೆ. ಕೇವಲ 15 ದಿನಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಕೊರೋನ ಯೋಧರಿಗೆ ಲಸಿಕೆ ನೀಡಲಾಗಿದೆ. ಈ ಸಾಧನೆ ಮಾಡಲು ಅಮೆರಿಕಕ್ಕೆ 18 ದಿನ ಬೇಕಾಯಿತು ಎಂದರು.
ಈ ವರ್ಷ ಭಾರತ 75ನೇ ವರ್ಷದ ಸ್ವಾತಂತ್ರ್ಯ ದಿನ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ, ಯುವಜನತೆ ತಮ್ಮೂರಿಗೆ ಸಂಬಂಧಿಸಿದ ಸ್ವಾತಂತ್ರ್ಯ ಸಂಗ್ರಾಮದ ಹೀರೋಗಳ ಬಗ್ಗೆ ಪುಸ್ತಕ ಬರೆಯಬೇಕು ಎಂದು ಮೋದಿ ಕರೆ ನೀಡಿದರು. ಕಳೆದ ವಾರ ಸರಕಾರ ಘೋಷಿಸಿದ ಪದ್ಮಪ್ರಶಸ್ತಿಗಳ ಬಗ್ಗೆ ಉಲ್ಲೇಖಿಸಿದ ಅವರು, ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಇತ್ತೀಚಿನ ಸಂಪ್ರದಾಯ ಮುಂದುವರಿದಿದೆ ಎಂದರು.







