ತನ್ನ ಬಂಧನಕ್ಕೆ ಮೊದಲು ಪೊಲೀಸರು-ಬಿಜೆಪಿ ಕಾರ್ಯಕರ್ತರ ನಂಟನ್ನು 'ಬಹಿರಂಗಪಡಿಸಿದ' ಪತ್ರಕರ್ತ ಮನ್‍ದೀಪ್ ಪೂನಿಯಾ
ರೈತ ಪ್ರತಿಭಟನಾ ಸ್ಥಳದಲ್ಲಿ ಹಿಂಸಾಚಾರ

ಹೊಸದಿಲ್ಲಿ: ರೈತರ ಪ್ರತಿಭಟನಾ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸ್ಟೇಶನ್ ಆಫೀಸರ್ ಅವರೊಂದಿಗೆ ದುರ್ವರ್ತನೆ ತೋರಿದ ಆರೋಪದಲ್ಲಿ ದಿಲ್ಲಿ ಪೊಲೀಸರು ಶನಿವಾರ ಸಿಂಘು ಬಾರ್ಡರ್ ನಲ್ಲಿ ಪತ್ರಕರ್ತರೊಬ್ಬರನ್ನು ಬಂಧಿಸಿದ್ದಾರೆ ಎಂದು “indianexpress.com’ ವರದಿ ಮಾಡಿದೆ.
ಶುಕ್ರವಾರ ರಾತ್ರಿ ಸಿಂಘು ಗಡಿಯಲ್ಲಿ ನಡೆದ ಘಟನೆಯ ಬಗ್ಗೆ ವರದಿ ಮಾಡಲು ತೆರಳಿದ್ದ ಫ್ರೀಲ್ಯಾನ್ಸ್ ಪತ್ರಕರ್ತ ಹಾಗೂ 'ದಿ ಕಾರವಾನ್' ಪರ ವರದಿ ಮಾಡುತ್ತಿರುವ ಮನ್ ದೀಪ್ ಪುನಿಯಾ ಹಾಗೂ ಆನ್ ಲೈನ್ ನ್ಯೂಸ್ ಇಂಡಿಯಾದ ಪತ್ರಕರ್ತ ಧರ್ಮೇಂದ್ರ ಸಿಂಗ್ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಶುಕ್ರವಾರ ನಡೆದ ಭಾರೀ ಹಿಂಸಾಚಾರದ ಹಿಂದೆ ದಿಲ್ಲಿ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು ಕೈವಾಡ ಇರುವ ಕುರಿತು ಫ್ರೀಲ್ಯಾನ್ಸ್ ಪತ್ರಕರ್ತ ಮನ್‍ದೀಪ್ ಪೂನಿಯ ತಾನು ಬಂಧನಕ್ಕೆ ಒಳಗಾಗುವ ಕೆಲವೇ ಗಂಟೆಗಳ ಮೊದಲು ಫೇಸ್ ಬುಕ್ ಲೈವ್ ನಲ್ಲಿ ಆರೋಪಿಸಿದ್ದಾರೆ.
ಶುಕ್ರವಾರ ಹಿಂಸಾಚಾರ ನಡೆದಾಗ ಘಟನಾ ಸ್ಥಳದಲ್ಲಿ ನಾನು ಹಾಜರಾಗಿದ್ದೆ ಎಂದು ಹೇಳಿರುವ ಪುನಿಯಾ ಶುಕ್ರವಾರ ಹಿಂಸಾಚಾರ ನಡೆಸಿದ್ದ ದುಷ್ಕರ್ಮಿಗಳೊಂದಿಗೆ ಆಡಳಿತಾರೂಢ ಬಿಜೆಪಿಗೆ ಸಂಬಂಧವಿದೆ ಎಂದು ಪುಷ್ಟೀಕರಿಸುವ ಪುರಾವೆಯನ್ನು ಹಂಚಿಕೊಂಡಿದ್ದಾರೆ.
ತ್ರಿವರ್ಣ ಧ್ವಜವನ್ನು ಹಿಡಿದಿದ್ದ 50-60 ಜನರ ಗುಂಪು ರೈತರ ಪ್ರತಿಭಟನಾ ಸ್ಥಳಕ್ಕೆ ಬಂದಿತ್ತು. ಆ ಗುಂಪು ರೈತರನ್ನು ನಿಂದಿಸಲು ಆರಂಭಿಸಿತು. ರೈತರಿಗೆ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿತು. ಬೆದರಿಕೆಯ ಬೆನ್ನಲ್ಲೇ ಕಲ್ಲು ತೂರಾಟವನ್ನು ಆರಂಭಿಸಿತು. ರೈತರಿಗೆ ಬೆದರಿಸಲು ಬಂದವರು 50-60ರಷ್ಟು ಜನರಿದ್ದರೆ, ಆ ಸ್ಥಳದಲ್ಲಿ ಸುಮಾರು 4000-5000ರಷ್ಟು ಪೊಲೀಸ್ ಸಿಬ್ಬಂದಿ ಇದ್ದರು. 2,000 ಪೊಲೀಸರು ಈ ಗುಂಪಿಗೆ ಭದ್ರತೆ ಒದಗಿಸುತ್ತಿದ್ದರು. ಪೊಲೀಸರ ರಕ್ಷಣೆಯಲ್ಲ್ಲಿ ಈ ಜನರು ಕಲ್ಲುತೂರಾಟ ನಡೆಸುತ್ತಿದ್ದರು. ಪೆಟ್ರೋಲ್ ಬಾಂಬ್ ಗಳನ್ನು ಎಸೆಯುತ್ತಿದ್ದರು. ಮಹಿಳಾ ಪ್ರತಿಭಟನಾಕಾರರು ತಂಗಲು ಇದ್ದ ಡೇರೆಗಳನ್ನು ಸುಡಲು ಯತ್ನಿಸಿದರು ಎಂದು ಪುನಿಯಾ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಆರೋಪಿಸಿದ್ದಾರೆ.
ಹಿಂಸಾಚಾರದಲ್ಲಿ ಭಾಗಿಯಾಗಿರುವವರ ಫೋಟೊಗಳನ್ನು ಪ್ರದರ್ಶಿಸಿದ ಪುನಿಯಾ ಇವರಿಗೆ ಬಿಜೆಪಿಯೊಂದಿಗೆ ಸಂಪರ್ಕ ಇರುವುದನ್ನು ಸಾಕ್ಷಿ ಸಹಿತ ತಿಳಿಸಿದರು.
ಪತ್ರಕರ್ತ ಪೂನಿಯಾ ಶುಕ್ರವಾರ ನಡೆದಿದ್ದ ಹಿಂಸಾಚಾರದ ಕುರಿತು ನಿಖರವಾಗಿ ವರದಿ ಮಾಡದ ತಮ್ಮ ಪತ್ರಕರ್ತ ಮಿತ್ರರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗಳು ಹಿಂಸಾಚಾರದ ಕುರಿತು ವರದಿ ಮಾಡಿದ ರೀತಿ ನನಗೆ ನೋವುಂಟು ಮಾಡಿದೆ. ಮಾಧ್ಯಮಗಳಲ್ಲಿ ಬಿತ್ತರವಾದ ವರದಿಯು ಅಲ್ಲಿ ನಿಜವಾಗಿ ನಡೆದ ಘಟನೆಗೆ ಸಂಪೂರ್ಣ ವಿರುದ್ಧವಾಗಿತ್ತು. ನಾನು ವೈಯಕ್ತಿಕವಾಗಿ ತಿಳಿದಿರುವ ಉತ್ತಮ ವರದಿಗಾರರು ಕೂಡ ತಪ್ಪಾದ ವರದಿಗಾರಿಕೆಯಲ್ಲಿ ತೊಡಗಿದ್ದರು ಎಂದು ಹೇಳಿದರು.
ದಿಲ್ಲಿ ಪೊಲೀಸರು ಪುನಿಯಾ ಹಾಗೂ ಇನ್ನೊಬ್ಬ ಪತ್ರಕರ್ತ ಧರ್ಮೇಂದ್ರ ಸಿಂಗ್ ಅವರನ್ನು ಶನಿವಾರ ರಾತ್ರಿ ವಶಕ್ಕೆ ಪಡೆದಿದ್ದರು. ಸಿಂಗ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಲಾಗಿದ್ದರೂ ದಿಲ್ಲಿ ಪೊಲೀಸರು ಪುನಿಯಾರನ್ನು ಬಿಡುಗಡೆ ಮಾಡಿರಲಿಲ್ಲ.
ಐಪಿಸಿಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಪುನಿಯಾ ವಿರುದ್ದ ಪ್ರಕರಣ ದಾಖಲಾಗಿರುವ ಬಗ್ಗೆ ಅಲಿಪುರ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು 'ದಿ ಕಾರವಾನ್ ಮ್ಯಾಗಝಿನ್' ಪೊಲಿಟಿಕಲ್ ಎಡಿಟರ್ ಹರ್ತೋಶ್ ಸಿಂಗ್ ಬಾಲ್ ಹೇಳಿದ್ದಾರೆ.
ಪುನಿಯಾ ಬಂಧನ ಸುದ್ದಿಯು ಪತ್ರಕರ್ತರಿಗೆ ಆಘಾತ ಉಂಟುಮಾಡಿದ್ದು, ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.







