ಕನ್ನಡ ನಾಡು ನುಡಿಗಾಗಿ ತ್ಯಾಗ ಮಾಡಿದವರ ಸೇವೆ ಸ್ಮರಣೀಯ: ಡಾ.ದಿವ್ಯಪ್ರಭಾ
ಪುತ್ತೂರು: ಕನ್ನಡ ಜಾಗೃತಿ ಸಮಾವೇಶ

ಪುತ್ತೂರು, ಜ.31: ಕನ್ನಡ ನಾಡು ನುಡಿಗಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸಿ ನಾವು ಕನ್ನಡ ಭಾಷೆ ಹಾಗೂ ಸಂಸ್ಕೃತಿಗಾಗಿ ಕೆಲಸ ಮಾಡಬೇಕಾಗಿದೆ ಎಂದು ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಡಾ. ದಿವ್ಯಪ್ರಭಾ ಗೌಡ ಚಿಲ್ತಡ್ಕ ಹೇಳಿದ್ದಾರೆ.
ದ.ಕ.ಜಿಲ್ಲಾ ಕನ್ನಡ ಸೇನೆಯ ಆಶ್ರಯದಲ್ಲಿ ಪುತ್ತೂರು ಪುರಭವನದಲ್ಲಿ ರವಿವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಲೂಕು ವೆಂಕಟರಾಯರಂತಹ ನಾಡು ನುಡಿಯ ಸೇವಕರ ಪರಿಶ್ರಮದ ಫಲವಾಗಿ ಕರ್ನಾಟಕ ಏಕೀಕರಣಗೊಂಡಿದೆ. ಮೈಸೂರು ರಾಜ್ಯವಾಗಿ ಉದಯವಾದ ಈ ಕರುನಾಡು ಬಳಿಕ ಕರ್ನಾಟಕವೆಂದು ನಾಮಕರಣಗೊಂಡಿತು. ಕನ್ನಡ ಭಾಷೆ ಉಳಿಸಲು ಕನ್ನಡ ಪರ ಸಂಘಟನೆಗಳು ನಿರಂತರ ಕೆಲಸ ಮಾಡಬೇಕು. ಕನ್ನಡ ಸೇನೆಯ ಸಂಘಟನೆ ಕಳೆದ 34 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಮಾತನಾಡಿ, ಕನ್ನಡದ ನೆಲ, ಜಲ, ಭಾಷೆ, ಗಡಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಅನ್ಯಾಯವಾದರೂ ಕನ್ನಡ ಸೇನೆ ಮುಂದೆ ನಿಂತು ಹೋರಾಟ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ ಕೆನರಾ ಬ್ಯಾಂಕ್ ನಿವೃತ್ತ ಪ್ರಬಂಧಕ ನಲ್ಕ ಗೋಪಾಲಕೃಷ್ಣ ಆಚಾರ್ಯ ಭಾಷಾ ಪ್ರೀತಿಯನ್ನು ಹುಟ್ಟಿಸುವ ಕೆಲಸವನ್ನು ಹಾಗೂ ಭಾಷೆಯ ಬೆಳವಣಿಗೆಗೆ ಪೂರಕವಾದ ಕೆಲಸಗಳನ್ನು ಕನ್ನಡ ಸೇನೆ ಮಾಡುತ್ತಿದೆ ಎಂದರು.
ಕನ್ನಡ ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಎಸ್.ಆರ್ ಕುಬೇರ ಶೆಟ್ಟಿ ಮಾತನಾಡಿದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಕನ್ನಡ ಸೇನೆಯ ವಿವಿಧ ಪ್ರಮುಖರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕನ್ನಡ ಸೇನೆಯ ಪ್ರಮುಖರಾದ ರತ್ನಾಕರ ಪೂಜಾರಿ, ಮುನಿರಾಜು, ರಾಜು ಗೌಡ, ಚೆನ್ನಬಸಪ್ಪ, ರಾಜೇಗೌಡ, ಎಲ್ಯಣ್ಣ ಗೌಡ, ಮುನಿಕೃಷ್ಣ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ನಿಕಟಪೂರ್ವ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಸೇನೆಯ ದ.ಕ. ಜಿಲ್ಲಾ ಕನ್ನಡ ಸೇನೆಯ ಗೌರವ ಸಲಹೆಗಾರ ವೃಷಭ ಆರಿಗ ಸ್ವಾಗತಿಸಿದರು. ಕನ್ನಡ ಸೇನೆಯ ದ.ಕ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಎ. ವಂದಿಸಿದರು. ಪತ್ರಕರ್ತೆ ಪ್ರಜ್ಞಾ ಒಡಿಲ್ನಾಲ ಕಾರ್ಯಕ್ರಮ ನಿರೂಪಿಸಿದರು.







