ಚುನಾವಣೆಯ ಹೊತ್ತಿಗೆ ಮಮತಾ ಬ್ಯಾನರ್ಜಿ ಏಕಾಂಗಿಯಾಗಲಿದ್ದಾರೆ: ಅಮಿತ್ ಶಾ
ರಾಜ್ಯದ ಅಭಿವೃದ್ಧಿ ಮರೆತು ತನ್ನ ಅಳಿಯನ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ

ಹೊಸದಿಲ್ಲಿ: ಇನ್ನು ಕೆಲವೇ ವಾರಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆಗೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಏಕಾಂಗಿಯಾಗಲಿದ್ದಾರೆ. ಅವರು ರಾಜ್ಯದ ಅಭಿವೃದ್ದಿಯನ್ನು ಮರೆತು ತನ್ನ ಅಳಿಯನ(ಅಭಿಷೇಕ್ ಬ್ಯಾನರ್ಜಿ)ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೌರಾ ಜಿಲ್ಲೆಯಲ್ಲಿ ರವಿವಾರ ನಡೆದ ರ್ಯಾಲಿಯನ್ನುದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನ ಐವರು ನಾಯಕರನ್ನು ದಿಲ್ಲಿಯಲ್ಲಿ ಬಿಜೆಪಿಯ ತೆಕ್ಕೆಗೆ ಸೇರಿಸಿಕೊಂಡ ಮರುದಿನ ಶಾ ಈ ಹೇಳಿಕೆ ನೀಡಿದ್ದಾರೆ. ಮಾಜಿ ಶಾಸಕ-ಸಂಪುಟ ಸಚಿವ ಸುವೇಂದು ಅಧಿಕಾರಿ ಬಿಜೆಪಿ ಸೇರಿದ ಬಳಿಕ ಆಡಳಿತಾರೂಢ ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರವಾಗುವುದು ನಿರಂತರವಾಗಿ ನಡೆಯುತ್ತಲೇ ಇದೆ.
ತೃಣಮೂಲ ಕಾಂಗ್ರೆಸ್ ನ ಇಷ್ಟೊಂದು ನಾಯಕರು ಬಿಜೆಪಿಗೆ ಏಕೆ ಸೇರುತ್ತಿದ್ದಾರೆ ಎಂಬುದರ ಬಗ್ಗೆ ಬ್ಯಾನರ್ಜಿ ಯೋಚಿಸಬೇಕು.ಅವರು ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲು ವಿಫಲವಾಗಿರುವುದು, ದುರಾಡಳಿತ, ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತವೇ ಇದಕ್ಕೆ ಕಾರಣ. ಇದು ಆರಂಭ ಮಾತ್ರ. ಚುನಾವಣೆ ಹತ್ತಿರವಾಗುವಾಗ ಅವರು ಏಕಾಂಗಿಯಾಗುತ್ತಾರೆ ಎಂದು ಗೃಹ ಸಚಿವರು ಹೇಳಿದ್ದಾರೆಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಧಿಕಾರಿ ಹಾಗೂ ಮಾಜಿ ಅರಣ್ಯ ಸಚಿವ ರಾಜೀವ್ ಬ್ಯಾನರ್ಜಿ ಸಹಿತ ಈ ತನಕ ಟಿಎಂಸಿಯ ಹಲವು ನಾಯಕರು ಬಿಜೆಪಿಗೆ ಸೇರಿದ್ದಾರೆ. ತೃಣಮೂಲ, ಎಡಪಕ್ಷಗಳು ಹಾಗೂ ಕಾಂಗ್ರೆಸ್ ನ ನಾಯಕರು ಇತ್ತೀಚೆಗೆ ಬಿಜೆಪಿಗೆ ಜಿಗಿದಿದ್ದರು.
ಮಮತಾ ಅವರು ತನ್ನ ಅಳಿಯ, ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿ ಪರವಾಗಿದ್ದಾರೆ ಎಂದು ಬಿಜೆಪಿ ಪದೇ ಪದೇ ದಾಳಿ ನಡೆಸುತ್ತಿದೆ. ಟಿಎಂಸಿಯ ಹಿರಿಯ ನಾಯಕರಾಗಿದ್ದ ಅಧಿಕಾರಿ ತಾನು ಪಕ್ಷ ತೊರೆಯಲು ಅಭಿಷೇಕ್ ಕಾರಣ ಎಂದಿದ್ದರು.
ಮಮತಾ ಬ್ಯಾನರ್ಜಿ ಸರಕಾರವು ಭತಿಜಾ ಕಲ್ಯಾಣ(ಅಳಿಯನ ಅಭಿವೃದ್ದಿ)ಕ್ಕಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಮೋದಿ ಸರಕಾರವು ಜನಕಲ್ಯಾಣಕ್ಕಾಗಿ ಕೆಲಸ ಮಾಡಲಿದೆ ಎಂದು ಶಾ ಭರವಸೆ ನೀಡಿದರು.







