ನಿರಂತರ ಪ್ರಯತ್ನದಿಂದ ನಿರ್ದಿಷ್ಠ ಗುರಿ ಮುಟ್ಟಲು ಸಾಧ್ಯ: ಬಿಷಪ್

ಉಡುಪಿ, ಜ.31: ನಿರಂತರ ಪ್ರಯತ್ನದಿಂದಾಗಿ ನಿರ್ದಿಷ್ಠ ಗುರಿ ಮುಟ್ಟುವದ ರಲ್ಲಿ ಸಂಶಯವಿಲ್ಲ. ಇದರಿಂದ ನಮ್ಮ ಉತ್ತಮ ಭವಿಷ್ಯವನ್ನು ಕಾಣಲು ಸಾಧ್ಯವಿದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಹಾಗೂ ಮುಂಬೈ ಜಾನ್ ಡಿಸಿಲ್ವ ಫೌಂಡೇಶನ್ ವತಿಯಿಂದ ರವಿವಾರ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿ ಯರ್ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾದ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಣದ ಕೊರತೆಯಿಂದ ಶಿಕ್ಷಣ ಪಡೆಯದೆ ಇರಬೇಕಾಗಿಲ್ಲ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಧನ ಸಹಾಯ ನೀಡಿ ಸಹಕರಿಸುವವರು ಹಲವು ಉದಾರ ಮನಸ್ಸಿನ ದಾನಿಗಳಿದ್ದಾರೆ. ಇಂದು ಸಮಾಜದಲ್ಲಿ ಅವಕಾಶಗಳಿದ್ದು ಅದರ ಸದುಪಯೋಗವನ್ನು ವಿದ್ಯಾಥಿರ್ ಗಳು ಪಡೆಯಬೇಕಾಗಿದೆ ಎಂದರು.
ಮಂಗಳೂರು ವಿದ್ಯಾಂಗ ಇಲಾಖೆಯ ಜಂಟಿ ನಿರ್ದೇಶಕ ಸಿಪ್ರಿಯನ್ ಮೊಂತೆರೋ ದಿಕ್ಸೂಚಿ ಭಾಷಣ ಮಾಡಿ, ಯುವಜನತೆ ಹೆಚ್ಚು ಸರಕಾರಿ ಹುದ್ದೆಗಳತ್ತ ಆಸಕ್ತಿ ಹೊಂದಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಹಂತದಲ್ಲಿಯೇ ಪ್ರಯತ್ನ ಮಾಡಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಆ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಫೌಂಡೇಶನ್ ಅಧ್ಯಕ್ಷ ಜಾನ್ ಡಿಸಿಲ್ವಾ, ಗ್ಲ್ಯಾಡಿಸ್ ಡಿಸಿಲ್ವಾ, ಉದ್ಯಾವರ ಚರ್ಚಿನ ಧರ್ಮಗುರು ವಂ.ಸ್ಟ್ಯಾನಿ ಬಿ.ಲೋಬೊ, ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಪ್ರತಿಭಾ ಪುರಸ್ಕಾರ ಸಮಿತಿ ಸಂಚಾಲಕ ಡಾ.ಜೆರಾಲ್ಡ್ ಪಿಂಟೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಉಡುಪಿ ವಲಯಾಧ್ಯಕ್ಷ ರೊನಾಲ್ಡ್ ಆಲ್ಮೇಡಾ, ಉದ್ಯಾವರ ಘಟಕಾಧ್ಯಕ್ಷ ಲೊರೇನ್ಸ್ ಡೆಸಾ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಪ್ರದೇಶ್ ಅಧ್ಯಕ್ಷ ರೋಬರ್ಟ್ ಮಿನೇಜಸ್ ಸ್ವಾಗತಿಸಿದರು. ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು. ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು.







