ಕಾರಿಗೆ ಸಿಮೆಂಟ್ ಮಿಕ್ಸರ್ ಲಾರಿ ಢಿಕ್ಕಿ: ನಾಲ್ವರು ಮೃತ್ಯು

ಬೆಂಗಳೂರು, ಜ.31: ಸಿಮೆಂಟ್ ಮಿಕ್ಸರ್ ಲಾರಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ಕು ಮಂದಿ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾತನನೂರು ನಿವಾಸಿ ಮಧು, ಶಿವಕುಮಾರ್ ಯಾನೆ ಶಿವು, ಮಿಲನ್ ಹಾಗೂ ಅನು ಎಂಬುವರು ಮೃತಪಟ್ಟವರು ಎಂದು ಪೊಲೀಸರು ಗುರುತಿಸಿದ್ದಾರೆ.
ಈ ನಾಲ್ವರು ಮಧು ಅವರ ಊರು ಸಾತನೂರಿಗೆ ಹೋಗಿ ಅಲ್ಲಿ ಊಟ ಮುಗಿಸಿ ಕಾರಿನಲ್ಲಿ ಶನಿವಾರ ಮಧ್ಯರಾತ್ರಿ 12:30ರಲ್ಲಿ ವಾಪಸಾಗುತ್ತಿದ್ದರು. ಅನು ಅವರನ್ನು ವಿದ್ಯಾರಣ್ಯಪುರಂಗೆ ಬಿಡಲು ಬರುತ್ತಿದ್ದ ಮಾರ್ಗಮಧ್ಯೆ ಸಿಮೆಂಟ್ ಮಿಕ್ಸರ್ ಲಾರಿ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇದರ ಪರಿಣಾಮ ಕಾರಿನಲ್ಲಿದ್ದ ಮಧು, ಶಿವು, ಮಿಲನ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅನು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಾಲ್ಕೂ ಮಂದಿಯ ಮೃತ ದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಹಿರಿಯ ಅಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸಂಬಂಧ ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.







