"ದೇಶದ ಐಕ್ಯತೆ ಸೌಹಾರ್ದತೆ ಬೆಳೆಸುವ ಸಾಹಿತ್ಯ ಬೆಳೆಯಲಿ"
ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸಂಧ್ಯಾ ಶೆಣೈ

ಹೆಬ್ರಿ, ಜ.31: ಬರವಣಿಗೆ, ಕವಿತೆ, ಪದ್ಯ, ಗದ್ಯ ಮೂಲಕ ಸಾಮಾಜಿಕ ಪ್ರಜ್ಞೆಯೊಂದಿಗೆ ಸಾಹಿತ್ಯಿಕ ವಿಚಾರ ಮೂಡಿಸುವುದೇ ಸಾಹಿತ್ಯ. ದೇಶದ ಐಕ್ಯತೆ ಸೌಹಾರ್ದತೆ ಬೆಳೆಸುವ ಸಾಹಿತ್ಯ ಬೆಳೆಯಬೇಕು. ಮನುಷ್ಯ ಜೀವನದಲ್ಲಿ ಸಾಮರಸ್ಯ, ಸಮನ್ವಯ, ಸಹಾನುಭೂತಿ, ಸರ್ವೋದಯ ಭಾವನೆ ತರುವಂತ ಸಾಹಿತ್ಯ ಸೃಷ್ಠಿಯಾಗಬೇಕು ಎಂದು ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಹಾಸ್ಯ ಭಾಷಣಕಾರ್ತಿ, ಸಾಹಿತಿ ಸಂಧ್ಯಾ ಶೆಣೈ ಹೇಳಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಘಟಕದ ವತಿಯಿಂದ ಬೆಳ್ವೆಯಲ್ಲಿ ರವಿವಾರ ನಡೆದ ಹೆಬ್ರಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಾಹಿತ್ಯವನ್ನು ವಿಂಗಡಿಸಿ ಮೇಲು- ಕೀಳು ಎನ್ನುವ ತಾರತಮ್ಯ ಮಾಡ ಬಾರದು. ಹಾಸ್ಯ ಸಾಹಿತ್ಯ ಇನ್ನೊಬ್ಬರ ಮನಸ್ಸು ಅರಳಿಸಬೇಕೆ ಹೊರತು ಕೆರಳಿಸು ವಂತಿರಬಾರದು. ಸರಕಾರ ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟ ಹೆಚ್ಚಿಸುವಲ್ಲಿ ವಿಶೇಷ ಆಸಕ್ತಿ ವಹಿಸಬೇಕು. ಕನ್ನಡ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಆಗುತ್ತಿಲ್ಲ. ಅತಿಯಾದ ಕೆಲಸದ ಒತ್ತಡದ ಜೀವನಕ್ಕೆ ಶಿಕ್ಷಕರ ಪ್ರತಿಭೆೆ ವ್ಯರ್ಥವಾಗುತ್ತಿದೆ ಎಂದರು.
ಕೇಂದ್ರೀಯ ಪಠ್ಯಕ್ರಮದಂತೆ ಬೋದಿಸುವ ಕನ್ನಡ ಮಾಧ್ಯಮ ಶಾಲೆಗಳು ಅಭಿವೃದ್ಧಿಯಾಗಬೇಕಾಗಿದೆ. ವಿಶೇಷ ಅನುದಾನದೊಂದಿಗೆ, ಕನ್ನಡ ಶಾಲೆಯನ್ನು ಮೇಲ್ದರ್ಜೆಗೇರಿಸಬೇಕು. ಅಂಕಗಳಿಕೆಯೆ ಶಿಕ್ಷಣದ ಮೂಲವಾಗಿರದೆ, ಸರ್ವ ತೋಮುಖ ಬೆಳವಣಿಗೆಗೆ ಪ್ರೋತ್ಸಾಹ ಶಿಕ್ಷಣದಿಂದ ಆಗಬೇಕು. ಮನೆಗಳಲ್ಲಿ ಮಾತೃಭಾಷೆ ಮಾತನಾಡಿದಾಗ ಕನ್ನಡ ಬೆಳವಣಿಗೆ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಸಮ್ಮೇಳನವನ್ನು ಉದ್ಘಾಟಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಜವಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ್ ಭಟ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿಯೂ ಕನ್ನಡ ಬದುಕಿನ ಭಾಷ್ಯವಾದಾಗ ಜೀವನ ಸಾರ್ಥಕವಾಗು ತ್ತದೆ. ಕನ್ನಡ ಭಾಷೆಯ ಕೀಳರಿಮೆಯಿಂದ ಹಿರಿಯ ಸಾಹಿತಿಗಳ ಸಾಹಿತ್ಯ ಕೃಷಿಯನ್ನು ಯುವ ಸಮೂಹಕ್ಕೆ ತಲುಪಿಸುವ ಕಾರ್ಯದಲ್ಲಿ ವಿಫಲವಾಗಿದ್ದೇವೆ. ಬದುಕಿನ ಭಾಷೆ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಶ್ರಮ ಅಗತ್ಯ ಎಂದು ತಿಳಿಸಿದರು.
ಸಾಹಿತ್ಯ ಸಮ್ಮೇಳನದ ಪೂರ್ವಾಧ್ಯಕ್ಷ ಬಿ.ಸಿ.ರಾವ್ ಶಿವಪುರ ಮಾತನಾಡಿ ದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಪಂ ಸದಸ್ಯರಾದ ಸುಪ್ರಿತಾ ಉದಯ ಕುಲಾಲ್, ಜ್ಯೋತಿ ಹರೀಶ್, ಹೆಬ್ರಿ ತಾಪಂ ಅಧ್ಯಕ್ಷ ರಮೇಶ್ ಪೂಜಾರಿ, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಹೆಬ್ರಿ ತಹಶೀಲ್ದಾರ್ ಕೆ.ಪುರಂದರ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್, ಹೆಬ್ರಿ ಕಾಲೇಜು ಪ್ರಾಂಶುಪಾಲ ಡಾ. ಪ್ರಸಾದ್ ರಾವ್ ಎಂ., ಉದ್ಯಮಿಗಳಾದ ಬಿ.ಗಣೇಶ್ ಕಿಣಿ, ಸತೀಶ್ ಕಿಣಿ, ಬೆಳ್ವೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಉದಯ ಕುಮಾರ ಪೂಜಾರಿ, ಬಿಇಒ ಅಶೋಕ್ ಕಾಮತ್, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ವರಿ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಸೂರ್ಗೋಳಿ, ಬೆಳ್ವೆ ಶಂಕರನಾರಾಯಣ ದೇವಸ್ಥಾನದ ಮೊಕ್ತೇಸರ ಶಂಕರ ಶೆಟ್ಟಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕೋಶಾಧ್ಯಕ್ಷ ವಲೇರಿಯನ್ ಮಿನೇಜಸ್, ಬೆಳ್ವೆ ಜುಮ್ಮಾ ಮಸೀದಿಯ ಖತೀಬ್ ಮಹಮ್ಮದ್ ರಫೀಕ್, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಕುಂದಾಪುರ ಅಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ, ಕಾರ್ಕಳ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಣೈ, ಕುಂದಾಪುರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿ, ಬೆಳ್ವೆ ಶಾಲೆಯ ಮುಖ್ಯೋಪಾಧ್ಯಾಯ ಕಿಶನ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಿ.ವಿ.ಆನಂದ ಅವರ ಸಾಹಿತ್ಯ ಕೃತಿಯನ್ನು ವಸಂತ ಹೊಳ್ಳ ಹೆಬ್ರಿ ಬಿಡುಗಡೆಗೊಳಿಸಿದರು. ಕಸಾಪ ಹೆಬ್ರಿ ಘಟಕದ ಗೌರವ ಕಾರ್ಯದರ್ಶಿ ಚಂದ್ರಶೇಖರ್ ಭಟ್ ಬಲ್ಲಾಡಿ ಸ್ವಾಗತಿಸಿದರು. ಅಧ್ಯಕ್ಷ ಪಿ.ವಿ.ಆನಂದ ಸಾಲಿಗ್ರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿತ್ಯಾನಂದ ಶೆಟ್ಟಿ ಹಾಗೂ ಮಾಲತಿ ಜಿ ಪೈ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ ವಂದಿಸಿದರು. ಇದಕ್ಕೂ ಮುನ್ನ ಕನ್ನಡ ತೇರಿನ ಭವ್ಯ ಮೆರವಣಿಗೆಯು ಟಿ.ಕೆ.ರಸ್ತೆಯಿಂದ ಬೆಳ್ವೆ ಶಾಲೆಯವರಿಗೆ ನಡೆಯಿತು.







