ಮಂಗಳೂರಿನಲ್ಲಿ ಆ್ಯಬ್‌ಸ್ಟ್ರಾಕ್ಟ್ ಆರ್ಟ್ ಕಲಾ ಪ್ರದರ್ಶನ ಉದ್ಘಾಟನೆ

ಮಂಗಳೂರು, ಜ.31: ಆರ್ಟ್ ಕೆನರಾ ಟ್ರಸ್ಟ್ ಎಸ್-ಕ್ಯೂಬ್ ಆರ್ಟ್ ಗ್ಯಾಲರಿಯೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ಆ್ಯಬ್‌ಸ್ಟ್ರಾಕ್ಟ್ ಆರ್ಟ್ ಕಲಾ ಪ್ರದರ್ಶನವನ್ನು ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ ಪ್ರದೀಪ್ ಶೆಟ್ಟಿ ಮತ್ತು ಮಂಗಳೂರು ವಿವಿ ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಎನ್.ಜಿ. ಪಾವಂಜೆ ಚೇರ್ ಇನ್ ಫೈನ್ ಆರ್ಟ್ಸ್‌ನ ಮಾಜಿ ನಿರ್ದೇಶಕ ಡಾ.ರವಿಶಂಕರ್ ರಾವ್ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
‘ಇಂತಾಚ್’ ಮಂಗಳೂರು ಅಧ್ಯಾಯದ ಮುಖ್ಯಸ್ಥ ಸುಭಾಸ್ ಚಂದ್ರ ಬಸು ಮಾತನಾಡಿ, ಕಲಾ ಪ್ರದರ್ಶನಗಳನ್ನು ನಡೆಸುವ ಪ್ರಾಮುಖ್ಯತೆ ಮತ್ತು ಈ ಪ್ರದೇಶದ ಕಲೆ ಮತ್ತು ಸಂಸ್ಕೃತಿಯನ್ನು ಪ್ರಸಾರ ಮಾಡುವ ವೇದಿಕೆಯನ್ನು ರಚಿಸುವ ಬಗ್ಗೆ ಹೇಳಿದರು.
ಕ್ಯಾಪ್ಟನ್ ಪ್ರದೀಪ್ ಶೆಟ್ಟಿ ಮಾತನಾಡಿದರು. ಡಾ.ರವಿಶಂಕರ್ ರಾವ್ ಆ್ಯಬ್‌ಸ್ಟ್ರಾಕ್ಟ್ ಆರ್ಟ್ ಕಲೆಯನ್ನು ಅರ್ಥಮಾಡಿಕೊಳ್ಳಲು ಒಳನೋಟಗಳನ್ನು ನೀಡಿದರು. ಸ್ಥಳೀಯ ಕಲಾವಿದರು ಮತ್ತು ಕಲಾ ಕಾರ್ಯಕ್ರಮಗಳನ್ನು ಬೆಂಬಲಿಸುವುದು ಬಹಳ ಮುಖ್ಯ. ಇದು ಕಲಾವಿದರ ಕೆಲಸ ಮತ್ತು ಪ್ರತಿಭೆಯ ಪ್ರಗತಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಆರ್ಟ್ ಕೆನರಾ ಟ್ರಸ್ಟ್‌ನ ನೇಮಿರಾಜ್ ಶೆಟ್ಟಿ ವಂದಿಸಿದರು.
ಆ್ಯಬ್‌ಸ್ಟ್ರಾಕ್ಟ್ ಆರ್ಟ್ ಕಲಾ ಪ್ರದರ್ಶನವು ಮಂಗಳೂರಿನ ಬಳ್ಳಾಲ್‌ಬಾಗ್‌ನಲ್ಲಿರುವ ಕೊಡಿಯಲ್‌ಗುತ್ತು ಸೆಂಟರ್ ಫಾರ್ ಆರ್ಟ್ ಮತ್ತು ಕಲ್ಚರ್‌ನಲ್ಲಿ ನಡೆಯುತ್ತಿದೆ. ಪ್ರದರ್ಶನವು ಮಂಗಳೂರು, ಉಡುಪಿ, ಬೆಂಗಳೂರು, ಗದಗ, ಕಾಸರಗೋಡು, ಹೈದರಾಬಾದ್ ಮತ್ತು ಮುಂಬೈನ 12 ಕಲಾವಿದರಿಂದ ವ್ಯಾಪಕವಾದ ಪ್ರಯೋಗಗಳನ್ನು ಪ್ರದರ್ಶಿಸುತ್ತದೆ. ಪ್ರದರ್ಶನದಲ್ಲಿ ಕ್ಯಾನ್ವಾಸ್‌ಗಳು, ಕಲ್ಲು ಕೆತ್ತನೆ, ಮರ ಮತ್ತು ಟೆರಾಕೋಟಾ ಕೃತಿಗಳು ಸೇರಿವೆ.
ಅನಿಲ್ ದೇವಾಡಿಗ, ದೀಪಕ್ ಗುಡ್ಡಕೇರಿ, ಕುಪ್ಪಣ್ಣ ಕಂದಗಲ್, ರಾಜೇಂದ್ರ ಕೇಡಿಗೆ, ಶ್ರೀಧರ್ ಕುಲಕರ್ಣಿ, ಸಂಪತ್ ಕುಮಾರ್, ಬಸವರಾಜ್ ಕುಟ್ನಿ, ಶರತ್ ಪಲಿಮಾರ್, ಪ್ರವೀಣ್ ಪುಂಚಿತಾಯ, ಸಂತೋಷ್ ರಾಥೋಡ್, ರಾಮಕೃಷ್ಣ ನಾಯಕ್ ಮತ್ತು ನೇಮಿರಾಜ್ ಶೆಟ್ಟಿ ಭಾಗವಹಿಸಿದ್ದರು. ಪ್ರದರ್ಶನವು ಫೆ.6ರವರೆಗೆ ಬೆಳಗ್ಗೆ 11ರಿಂದ ಸಂಜೆ 7 ರವರೆಗೆ ವೀಕ್ಷಕರಿಗೆ ತೆರೆದಿರುತ್ತದೆ.







