ಕೋವಿಡ್ ಲಸಿಕೆ ತೆಗೆದುಕೊಂಡ ಅಂಗನವಾಡಿ ಶಿಕ್ಷಕಿ ಸಾವು

ಹೈದರಾಬಾದ್, ಜ. 31: ಇತ್ತೀಚೆಗೆ ಕೋವಿಡ್ ಲಸಿಕೆ ತೆಗೆದುಕೊಂಡಿದ್ದ ತೆಲಂಗಾಣದ ಅಂಗನವಾಡಿ ಶಿಕ್ಷಕಿಯೊಬ್ಬರು ಇಲ್ಲಿನ ಆರೋಗ್ಯ ಕೇಂದ್ರವೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಶಿಕ್ಷಕಿಯ ಸಾವಿಗೂ ಕೋವಿಡ್ ಲಸಿಕೆಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಇಲಾಖೆ ಹೇಳಿದೆ. 55 ವರ್ಷದ ಸುಶೀಲಾ ಅವರಿಗೆ ಜನವರಿ 19ರಂದು ಲಸಿಕೆ ನೀಡಲಾಗಿತ್ತು. ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಶನಿವಾರ ನಿಝಾಮ್ಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ನಲ್ಲಿ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಇಲಾಖೆ ಹೇಳಿದೆ.
ಅವರು ಅಧಿಕ ರಕ್ತದೊತ್ತಡದಿಂದ ದೀರ್ಘ ಕಾಲ ಬಳಲುತ್ತಿದ್ದರು. ಅಲ್ಲದೆ ಅವರಿಗೆ ಶ್ವಾಸಕೋಶದ ಸಮಸ್ಯೆ ಕೂಡ ಇತ್ತು. ಕೋವಿಡ್ ಲಸಿಕೆ ತೆಗೆದುಕೊಂಡಿರುವುದರಿಂದ ಅವರು ಸಾವನ್ನಪ್ಪಿಲ್ಲ ಎಂದು ಮಂಚೇರಿಯಲ್ ಜಿಲ್ಲಾ ವೈದ್ಯಕೀಯ ಹಾಗೂ ಆರೋಗ್ಯಾಧಿಕಾರಿ (ಡಿಎಂಎಚ್‌ಒ) ಡಾ. ಎಂ. ನೀರಜ್ ಹೇಳಿದ್ದಾರೆ. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಸುಶೀಲಾ ಅವರನ್ನು ಎರಡು ದಿನಗಳ ಹಿಂದೆ ಎನ್‌ಐಎಂಎಸ್‌ಗೆ ದಾಖಲಿಸಲಾಗಿತ್ತು. ಈ ನಡುವೆ ತೆಲಂಗಾಣದ ಆರೋಗ್ಯ ಸಚಿವ ಇ. ರಾಜೇಂದರ್, ಕೋವಿಡ್ ಲಸಿಕೆ ತೆಗೆದುಕೊಳ್ಳಲು ನೋಂದಣಿ ಮಾಡಿಕೊಂಡ ಆರೋಗ್ಯ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಸಲಹೆ ನೀಡಲು ರಾಜ್ಯ ಸರಕಾರ ವ್ಯವಸ್ಥೆಯೊಂದನ್ನು ರೂಪಿಸಲಿದೆ ಎಂದಿದ್ದಾರೆ.







