‘‘ಕೈ ಕಡಿಯಬೇಕು, ನಾಲಗೆ ಸೀಳಬೇಕು’’: ಈಶ್ವರಪ್ಪ ಮತ್ತೆ ವಿವಾದಾತ್ಮಕ ಹೇಳಿಕೆ

ಬೆಳ್ತಂಗಡಿ, ಜ.31: ಉಜಿರೆಯಲ್ಲಿ ರವಿವಾರ ನಡೆದ ಬೆಳ್ತಂಗಡಿ ಮಂಡಲದ ಸ್ಥಳೀಯ ಸಂಸ್ಥೆಗಳಲ್ಲಿ ಜಯಗಳಿಸಿದ ಬಿಜೆಪಿಯ ಚುನಾಯಿತ ಪ್ರತಿನಿಧಿಗಳ ಅಭಿನಂದನಾ ಸಭೆಯಲ್ಲಿ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕೈ ಕಡಿಯುವ ನಾಲಗೆ ಸೀಳುವ ಭಾಷಣ ಮಾಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, "ತಾಕತ್ತಿದ್ದರೆ ನಮ್ಮ ಎದುರಿಗೆ ಬಂದು ಗೋವುಗಳನ್ನು ಮುಟ್ಟಿರಿ ನಾವು ನೋಡಿಕೊಳ್ಳುತ್ತೇವೆ. ಗೋವುಗಳನ್ನು ಕಡಿದರೆ ಕೈ ಕಡಿಯುವ ದಿನ ಬರಲಿದೆ, ಗೋವು ಕಳ್ಳರು ನಿಮ್ಮ ಗ್ರಾಮಗಳಿಗೆ ಬಂದರೆ ಕಾನೂನು ಬದ್ಧವಾಗಿಯೇ ಅವರ ಕೈಕಾಲು ಮುರಿಯುವ ಕೆಲಸ ಆಗಬೇಕು, ಈ ನೆಲದಲ್ಲಿ ಹುಟ್ಟಿ ಇಲ್ಲಿನ ಅನ್ನ ತಿಂದು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವ ದೇಶದ್ರೋಹಿಗಳ ನಾಲಗೆ ಸೀಳಬೇಕು" ಎಂದರು.
ಬಿಜೆಪಿಯಿಂದ ಗೆದ್ದಿರುವ ಮುಸ್ಲಿಮರು, ಕ್ರೈಸ್ತರು 'ಭಾರತ ಮಾತಾಕೀ ಜೈ' ಎನ್ನುವವರು, ಅವರೆಂದೂ ದೇಶಪ್ರೇಮಿಗಳಾಗಿದ್ದಾರೆ ಎಂದರು. ಬಿಜೆಪಿಯನ್ನು ನಗರದ ಪಕ್ಷ ಎಂದು ಕರೆಯುತ್ತಿದ್ದರು, ಆದರೆ ಅದು ಈಗ ಗ್ರಾಮೀಣ ಜನರ ಪಕ್ಷವಾಗಿದೆ. ನೂತನ ಗ್ರಾ. ಪಂ ಸದಸ್ಯರುಗಳು ತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆಯಿಂದ ಒಳ್ಳೆಯ ಕೆಲಸ ಮಾಡಿ ಅವರಿಗಾಗಿ ಸರಕಾರದ ವತಿಯಿಂದ ತರಬೇತಿಗಳನ್ನು ಆಯೋಜಿಸಲಾಗುತ್ತಿದ್ದು ಅದರಲ್ಲಿ ಭಾಗವಹಿಸಿ ಮಾಹಿತಿ ಪಡೆಯುವಂತೆ ಅವರು ಸಲಹೆ ನೀಡಿದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ, ನಾವು ಯಾರೊಂದಿಗೂ ತಾಂಟುವುದಿಲ್ಲ. ಆದರೆ ದೇಶಕ್ಕೋಸ್ಕರ ಹಿಂದೂ ಧರ್ಮಕೋಸ್ಕರ ಯಾರೊಂದಿಗೂ ತಾಂಟಲು ಸಿದ್ಧರಿದ್ದೇವೆ. ರಾಷ್ಟ್ರ ವಿರೋಧಿ ಘೋಷಣೆ ಕೂಗುವವರನ್ನು, 'ಲವ್ ಜಿಹಾದ್' ಮಾಡುವವರೊಂದಿಗೆ, ಅಕ್ರಮವಾಗಿ ಗೋಹತ್ಯೆ ಮಾಡುವವರೊಂದಿಗೆ ತಾಂಟುತ್ತೇವೆ ಅವರನ್ನು ಹತ್ತಿಕ್ಕುತ್ತೇವೆ ಎಂದು ಅವರು ಹೇಳಿದರು.
ಬೆಳ್ತಂಗಡಿಯ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಇನ್ನೂ ತುಂಬ ಕೆಲಸ ನಡೆಯಬೇಕಾಗಿದೆ. ಅದಕ್ಕಾಗಿ ಅನುದಾನ ಒದಗಿಸುವಂತೆ ಅವರು ಸಚಿವರುಗಳಲ್ಲಿ ವಿನಂತಿಸಿದರು.
ಸಭೆಯಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಪಕ್ಷದ ಮುಖಂಡರುಗಳಾದ ಸುದರ್ಶನ್ ಎಂ., ಮೀನಾಕ್ಷಿ ಶಾಂತಿಗೋಡು, ಹರಿಕೃಷ್ಣ ಬಂಟ್ವಾಳ, ಸುಧೀರ್ ಶೆಟ್ಟಿ, ರಾಮದಾಸ್ ಭಟ್, ಕಸ್ತೂರಜ ಪಂಜ, ಕೊರಗಪ್ಪ ನಾಯ್ಕ, ಶಶಿಧರ ಕಲ್ಮಂಜ, ಜಯಾನಂದ ಗೌಡ ಹಾಗೂ ಇತರರು ಇದ್ದರು.
ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿದರು. ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.








