ದ.ಕ. ಜಿಲ್ಲಾದ್ಯಂತ ಪೊಲಿಯೊ ಲಸಿಕೆ ಕಾರ್ಯಕ್ರಮ: ಶೇ.94 ಮಕ್ಕಳಿಗೆ ಲಸಿಕೆ

ಮಂಗಳೂರು, ಜ.31: ದ.ಕ. ಜಿಲ್ಲಾದ್ಯಂತ ರವಿವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆದಿದ್ದು, ಒಟ್ಟು 1,51,398 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿಯಲ್ಲಿ ಶೇ.94ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೊ ಲಸಿಕಾ ದಿನಾಚರಣೆ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರ ಪುತ್ರಿಗೆ ಲಸಿಕೆ ಹಾಕುವ ಮೂಲಕ ಶಾಸಕ ಡಾ.ವೈ. ಭರತ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಲ್ಸ್ ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಹಾಕಬೇಕು. ಕೆಲ ವರ್ಷಗಳಿಂದೀಚೆಗೆ ಪೋಲಿಯೊ ಲಸಿಕೆ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1999ರ ಬಳಿಕ ಯಾವುದೇ ಪೋಲಿಯೊ ಪ್ರಕರಣ ವರದಿಯಾಗಿಲ್ಲ. ರಾಜ್ಯದಲ್ಲಿ 2007ರಲ್ಲಿ ಹಾಗೂ ಕೋಲ್ಕತ್ತಾದಲ್ಲಿ 2011ರಲ್ಲಿ ಕೊನೆಯ ಪ್ರಕರಣ ಪತ್ತೆಯಾಗಿತ್ತು. ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಈಗಲೂ ಪೋಲಿಯೊ ಇರುವುದರಿಂದ ನಮ್ಮ ದೇಶದಲ್ಲೂ ಲಸಿಕಾ ಕಾರ್ಯಕ್ರಮ ಮುಂದುವರಿಸಿಕೊಂಡು ಬರಲಾಗಿದೆ ಎಂದರು.
ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ, ಜಿಲ್ಲಾ ಶಸಚಿಕಿತ್ಸಕ ಡಾ. ಸದಾಶಿವ ಶಾನುಭೋಗ್, ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್, ಮಕ್ಕಳ ವೈದ್ಯಕೀಯ ಯೂನಿಯನ್‌ನ ಡಾ.ಕೃಷ್ಣ, ಲೇಡಿಗೋಷನ್ ಆರ್‌ಎಂಒ ಡಾ. ಬಾಲಕೃಷ್ಣ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಾಪಾಬೋವಿ, ರೋಟರಿ ಮಂಗಳೂರಿನ ಆರ್ಚಿಬಾಲ್ಡ್ ಮಿನೇಜಸ್ ಮತ್ತಿತರರು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ನಿರೂಪಿಸಿ, ವಂದಿಸಿದರು.







