ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್‍ಯಾಲಿಯ ಬಳಿಕ 100ಕ್ಕೂ ಅಧಿಕ ಜನರು ನಾಪತ್ತೆ: ಸಂಯುಕ್ತ ಕಿಸಾನ್ ಮೋರ್ಚಾ

ಹೊಸದಿಲ್ಲಿ: ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್‍ಯಾಲಿಯ ಬಳಿಕ 100ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ ಎಂದು ಆತಂಕವನ್ನು ವ್ಯಕ್ತಪಡಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಅಂತಹ ನಾಪತ್ತೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಸಂಗ್ರಹಿಸಿದ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಾಣೆಯಾದವರ ಸಂಪೂರ್ಣ ಹೆಸರು, ಪೂರ್ಣವಿಳಾಸ, ವ್ಯಕ್ತಿಯ ಫೋನ್ ನಂಬರ್, ಆತನ ಮನೆಯ ಇತರ ಸಂಪರ್ಕ ಸಂಖ್ಯೆ ಹಾಗೂ ಯಾವಾಗ ಕಾಣೆಯಾಗಿದ್ದಾನೆಂಬ ಕುರಿತು ಮಾಹಿತಿ ನೀಡಲು ಎಸ್ ಕೆಎಂ ವಿನಂತಿಸಿದೆ.
ಪತ್ರಕರ್ತರಾದ ಮನ್ ದೀಪ್ ಪುನಿಯಾ ಹಾಗೂ ಇತರರನ್ನು ತಪ್ಪು ಹಾಗೂ ಕಪೋಲಕಲ್ಪಿತ ಆರೋಪಗಳ ಮೇಲೆ ಬಂಧಿಸಿರುವುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಖಂಡಿಸಿದೆ.
ಪೊಲೀಸರು ಹಾಗೂ ಸರಕಾರದ ಅನೇಕ ಹಿಂಸಾಚಾರದ ಪ್ರಯತ್ನಗಳ ಹೊರತಾಗಿಯೂ ರೈತರು ಇನ್ನೂ ಮೂರು ಕೃಷಿ ಕಾಯ್ದೆಗಳನ್ನು ಹಾಗೂ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಕುರಿತು ಚರ್ಚಿಸುತ್ತಿದ್ದಾರೆ. ದಿಲ್ಲಿ ಮೋರ್ಚಾ ಸುರಕ್ಷಿತ ಹಾಗೂ ಶಾಂತಿಯುತವಾಗಿದೆ ಎಂದು ಸಂಬಂಧಪಟ್ಟ ಎಲ್ಲ ನಾಗರಿಕರಿಗೆ ಸ್ಪಷ್ಟಪಡಿಸಲು ನಾವು ಬಯಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.







