ರಾಜ್ಯಾದ್ಯಂತ ಸೋಮವಾರದಿಂದ ಒಂಬತ್ತು, ಪ್ರಥಮ ಪಿಯು ಪೂರ್ಣಾವಧಿ ತರಗತಿ ಆರಂಭ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.31: ರಾಜ್ಯಾದ್ಯಂತ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯು ಪೂರ್ಣಾವಧಿ ತರಗತಿಗಳು ಪ್ರಾರಂಭವಾದ ಬೆನ್ನಲ್ಲೇ ನಾಳೆಯಿಂದ(ಫೆ.1) ಒಂಬತ್ತು ಹಾಗೂ ಪ್ರಥಮ ಪಿಯುಗೆ ಪೂರ್ಣಾವಧಿ ತರಗತಿ ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲಾ-ಕಾಲೇಜುಗಳು ಸಿದ್ಧಗೊಂಡಿವೆ.
ರಾಜ್ಯ ಸರಕಾರ ಆರೋಗ್ಯ ಹಾಗೂ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಹಂತ, ಹಂತವಾಗಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಮುಂದಾಗಿದ್ದು, ಜ.1ರಿಂದ ಹತ್ತು ಹಾಗೂ ದ್ವಿತೀಯ ಪಿಯು ಪೂರ್ಣಾವಧಿ ತರಗತಿಗಳು ಪ್ರಾರಂಭಗೊಂಡವು. ಈಗ ಒಂಬತ್ತು ಹಾಗೂ ಪ್ರಥಮ ಪಿಯು ತರಗತಿಗಳು ಆರಂಭಗೊಳ್ಳುತ್ತಿವೆ.
ಈಗಾಗಲೇ ಪ್ರಾರಂಭವಾಗಿರುವ ದ್ವಿತೀಯ ಪಿಯುಸಿಯಲ್ಲಿ ಶೇ.75 ಹಾಗೂ ಹತ್ತನೇ (ಎಸೆಸೆಲ್ಸಿ) ತರಗತಿಯಲ್ಲಿ ಶೇ.70ರಷ್ಟು ಹಾಜರಾತಿ ಇದೆ. ಹಾಗೂ ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿಲ್ಲ. ಈ ಅಂಶವನ್ನು ತಾಂತ್ರಿಕ ಸಲಹಾ ಸಮಿತಿ ಅವಲೋಕಿಸಿ 9 ಮತ್ತು 11ನೇ ತರಗತಿ ಪೂರ್ಣಾವಧಿ ಆರಂಭಕ್ಕೆ ಅನುಮತಿ ನೀಡಿದೆ.
ಈಗಾಗಲೇ ಶಾಲಾ ಆಡಳಿತ ಮಂಡಳಿಗಳು ಪೂರ್ಣಾವಧಿ ತರಗತಿಗಳು ಆರಂಭಕ್ಕೆ ಪೂರ್ಣಸಿದ್ದತೆಗಳನ್ನು ಮಾಡಿಕೊಂಡಿದ್ದು, ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹಾಗೂ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಶಾಲೆ ಆರಂಭಕ್ಕೆ ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಇತ್ತೀಚೆಗೆ ಶಿಕ್ಷಕ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಎಲ್ಲ ತರಗತಿಗಳು ಪೂರ್ಣಾವಧಿ ನಡೆಯಬೇಕೆಂದು ಒತ್ತಾಯಿಸಿದ್ದರು. ಮಕ್ಕಳ ಹಿತದೃಷ್ಟಿಯಿಂದ ಶಾಲಾ ಆರಂಭಕ್ಕೆ ಸರಕಾರಿ ನೌಕರರ ಸಂಘ, ಶಿಕ್ಷಕರ ಸಂಘಟನೆಗಳು ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಶಾಲಾ ಆರಂಭಿಸುತ್ತಿದ್ದೇವೆ'
-ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
-ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಕೈತೊಳೆಯಲು ಸ್ಯಾನಿಟೈಸರ್ ಇಲ್ಲವೇ ಸಾಬೂನು ಬಳಸುವುದು ಕಡ್ಡಾಯ.
-ಶಾಲಾ ಶಿಕ್ಷಕರು ಕೋವಿಡ್ ಪರೀಕ್ಷೆ ಫಲಿತಾಂಶದೊಂದಿಗೆ ಶಾಲೆಗೆ ಬರಬೇಕು. ಹಾಗೂ ಫೇಸ್ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಧರಿಸುವುದು, ಮಕ್ಕಳ ಶಾರೀರಿಕ ಅಂತರವನ್ನು ಉಳಿಸಿಕೊಳ್ಳುವಲ್ಲಿ ಗಮನ ಹರಿಸಬೇಕು.
-ಆರೋಗ್ಯ, ರೋಗಲಕ್ಷಣಗಳ ಕುರಿತು ಆಗಾಗ್ಗೆ ಗಮನ ಹರಿಸುವುದು, ತರಗತಿ ಕೊಠಡಿಯಲ್ಲಿ ಚಿಕ್ಕ ಸಂಖ್ಯೆಯ ಮಕ್ಕಳನ್ನು ಸುರಕ್ಷಿತ ಅಂತರದಲ್ಲಿ ಕೂರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು.
-ಸಂಜೆ ಶಾಲೆ ಮುಗಿದ ನಂತರ ಶಾಲಾವರಣ, ತರಗತಿ ಕೊಠಡಿ ಮತ್ತು ಶೌಚಾಲಯಗಳನ್ನು ಸ್ಯಾನಿಟೈಸರ್ ಮಾಡುವುದನ್ನು ಮರೆಯದೇ ಪಾಲಿಸಬೇಕಿದೆ.
-ಕಳೆದ ವರ್ಷದ ಬಸ್ ಪಾಸುಗಳನ್ನೇ ಬಳಸಲು ಅವಕಾಶವಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು.







