ನಾಪತ್ತೆಯಾಗಿದ್ದ ಯುವಕ ಅರಣ್ಯ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು, ಜ.31: ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ಅವರ ಸಂಬಂಧಿ ಎನ್ನಲಾದ ಯುವಕನೋರ್ವ ಅರಣ್ಯ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಸಿದ್ದಾರ್ಥ್ ದೇವೆಂದರ್(28) ಕೊಲೆಯಾದ ದುದೈರ್ವಿ ಎಂದು ತಿಳಿದು ಬಂದಿದೆ.
ಜ.19 ರಂದು ಸ್ನೇಹಿತರನ್ನು ಭೇಟಿಯಾಗುವ ಸಲುವಾಗಿ ಸಿದ್ದಾರ್ಥ್ ಅಮೆರಿಕಾ ಪ್ರಯಾಣಕ್ಕೆ ಮುಂದಾಗಿದ್ದ. ಈ ಬಗ್ಗೆ ಈತ ತಂದೆಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿದ್ದು, ನಂತರ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಮೆರಿಕಾ ಹೋಗಿಲ್ಲದಿರುವುದು ಗೊತ್ತಾಗಿ ದೇವೆಂದರ್ ಅವರು ಪುತ್ರ ಕಾಣೆಯಾಗಿದ್ದಾನೆ ಎಂದು ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆಂಧ್ರಪ್ರದೇಶದ ನೆಲ್ಲೂರು ಅರಣ್ಯ ಪ್ರದೇಶದಲ್ಲಿ ಅಪರಿಚಿತರು ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವ್ಯವಸ್ಥಿತವಾಗಿ ಸಿದ್ದಾರ್ಥ್‍ನನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಅಮೃತಹಳ್ಳಿ ಪೊಲೀಸರ ತಂಡ ನೆಲ್ಲೂರಿಗೆ ಪ್ರಯಾಣ ಬೆಳೆಸಿದೆ ಎಂದು ಮೂಲಗಳು ತಿಳಿಸಿವೆ.





