ಸೀರಮ್ ಸಂಸ್ಥೆ ಕೋವಿಶೀಲ್ಡ್ ಟ್ರೇಡ್‌ಮಾರ್ಕ್ ಬಳಕೆಗೆ ತಡೆ ಕೋರಿದ್ದ ಅರ್ಜಿ ವಜಾ

ಹೊಸದಿಲ್ಲಿ, ಜ.31: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಕೊರೋನ ಲಸಿಕೆಗೆ ಕೋವಿಶೀಲ್ಡ್ ಟ್ರೇಡ್‌ಮಾರ್ಕ್ ಬಳಸುವುದಕ್ಕೆ ತಡೆ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಪುಣೆಯ ವಾಣಿಜ್ಯ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.
ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ತಾನು ಮೊದಲು ಔಷಧಿ ಉತ್ಪಾದಿಸಿರುವುದರಿಂದ ಸೀರಮ್ ಸಂಸ್ಥೆಯ ಲಸಿಕೆಗೆ ಇದೇ ಹೆಸರು ಬಳಸದಂತೆ ನಿರ್ದೇಶಿಸಬೇಕೆಂದು ಕೋರಿ ಮಹಾರಾಷ್ಟ್ರದ ನಾಂದೇಡ್ ಮೂಲದ ಔಷಧ ಉತ್ಪಾದನಾ ಸಂಸ್ಥೆ ಕ್ಯೂಟಿಸ್ ಬಯೋಟೆಕ್ ಜನವರಿ 4ರಂದು ಸಿವಿಲ್ ಮೊಕದ್ದಮೆ ದಾಖಲಿಸಿತ್ತು. ಲಸಿಕೆಗೆ ಕೋವಿಶೀಲ್ಡ್ ಟ್ರೇಡ್‌ಮಾರ್ಕ್ ಅಥವಾ ಗೊಂದಲಕ್ಕೆ ಕಾರಣವಾಗುವ ಯಾವುದೇ ಗುರುತು ಬಳಸದಂತೆ ಸೀರಮ್ ಸಂಸ್ಥೆಗೆ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದಕ್ಕೆ ಉತ್ತರಿಸಿದ್ದ ಸೀರಮ್ ಸಂಸ್ಥೆ, ಎರಡೂ ಉತ್ಪನ್ನಗಳಲ್ಲಿರುವ ವ್ಯತ್ಯಾಸ ಮತ್ತು ಟ್ರೇಡ್‌ಮಾರ್ಕ್‌ಗೆ ಅರ್ಜಿ ಸಲ್ಲಿಸಿದ ದಿನಾಂಕದ ಬಗ್ಗೆ ಗಮನ ಸೆಳೆದಿತ್ತು. ಕ್ಯೂಟಿಸ್ ಬಯೋಟೆಕ್ ಸಂಸ್ಥೆ ತನ್ನ ವಾದಕ್ಕೆ ಪೂರಕವಾದ ಮತ್ತು ಸಮರ್ಥನೀಯವಾದ ದಾಖಲೆಗಳನ್ನು ಒದಗಿಸಿಲ್ಲ. ಸೀರಮ್ ಸಂಸ್ಥೆಯ ಉಪಕ್ರಮದಿಂದ ತನಗೆ ಭರಿಸಲಾಗದಷ್ಟು ನಷ್ಟವಾಗಲಿದೆ ಎಂಬುದನ್ನೂ ಅರ್ಜಿಯಲ್ಲಿ ದಾಖಲಿಸಲಾಗಿಲ್ಲ ಎಂದು ಹೇಳಿರುವ ನ್ಯಾಯಾಲಯ ಅರ್ಜಿಯನ್ನು ತಳ್ಳಿಹಾಕಿದೆ.
ನ್ಯಾಯಾಲಯದ ಆದೇಶ ಕೈಸೇರಿದ ಬಳಿಕ ಅದನ್ನು ವಿವರವಾಗಿ ಪರಿಶೀಲಿಸಿ ಮುಂದಿನ ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಕ್ಯೂಟಿಸ್ ಬಯೋಟೆಕ್‌ನ ವಕೀಲರು ಹೇಳಿದ್ದಾರೆ. ಈ ಮಧ್ಯೆ, ಜೂನ್ ತಿಂಗಳೊಳಗೆ ಕೊರೋನ ವಿರುದ್ಧ ಮತ್ತೊಂದು ಲಸಿಕೆ ಕೊವೊವ್ಯಾಕ್ಸ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ. ಅಮೆರಿಕದ ಔಷಧ ಉತ್ಪಾದನಾ ಸಂಸ್ಥೆ ನೊವವ್ಯಾಕ್ಸ್ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಸೆರಮ್ ಸಂಸ್ಥೆ ಹಾಗೂ ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಸಹಯೋಗದಲ್ಲಿ ಉತ್ಪಾದಿಸಲಾಗುವುದು ಎಂದು ಮೂಲಗಳು ಹೇಳಿವೆ.







