ಗೋ ಹತ್ಯೆ ಕಾನೂನು: ರೈತರು ಕಂಗಾಲು
ಮಾನ್ಯರೇ,
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೈತರ ಸಂಕಟಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಗೋಹತ್ಯೆ ಕಾನೂನಿನಿಂದ ಗೋಹತ್ಯೆ ಕಡಿಮೆಯಾಗುತ್ತದೆ, ಗೋಮಾಂಸಾಹಾರ ಇಲ್ಲವಾಗುತ್ತದೆ ಎಂದೇ ನಾಡಿನ ಜನರು ಭಾವಿಸಿದ್ದರು. ಆದರೆ, ಯಾರಿಗೋ ಬಿಟ್ಟ ಬಾಣ ಇನ್ನಾರಿಗೋ ತಾಗಿದೆ. ನಾಡಿನ ಸಾವಿರಾರು ರೈತರು ತಮ್ಮ ದನಗಳನ್ನು ಮಾರಲಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮಾರಾಟಕ್ಕೆಂದು ಸಂತೆಗೆ ತಂದ ಗೋವುಗಳನ್ನು ಕೊಳ್ಳುವವರೇ ಇಲ್ಲದೆ ಕಂಗಾಲಾಗಿದ್ದಾರೆ. ‘ಕಷ್ಟದ ಸಮಯದಲ್ಲಿ ಗೋವುಗಳನ್ನು ಮಾರದೆ ನಮ್ಮ ಹೆಂಡಿರನ್ನು ಮಾರಬೇಕೆ?’ ಎಂದು ಪತ್ರಕರ್ತರಿಗೆ ಪ್ರಶ್ನೆ ಕೇಳಿ ಕಣ್ಣೀರಿಟ್ಟಿದ್ದಾರೆ. ಈ ಗೋವುಗಳನ್ನು ಮಾರಲೂ ಆಗದೆ, ಮನೆಯಲ್ಲಿಟ್ಟು ಸಾಕಲೂ ಆಗದೆ ಅತಂತ್ರರಾಗಿದ್ದಾರೆ. ವಿಪರ್ಯಾಸವೆಂದರೆ ರೈತರನ್ನು ಇಂತಹ ಇಕ್ಕಟ್ಟಿನಲ್ಲಿ ಸಿಲುಕಿಸಿ ಅವರ ಕೈಯಿಂದ ಗೋವುಗಳನ್ನು ಉಚಿತವಾಗಿ ಕಸಿದುಕೊಂಡು ಅವುಗಳನ್ನು ಕಸಾಯಿ ಖಾನೆಗಳಿಗೆ ಮಾರುವ ಒಂದು ತಂಡ ಸಕ್ರಿಯವಾಗಿದೆ. ಗೋರಕ್ಷಕರು ಎಂದು ಗುರುತಿಸಿಕೊಂಡ ಒಂದು ಗುಂಪು ಈ ಮೂಲಕವೇ ಹಣ ಮಾಡಿಕೊಳ್ಳುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಗೋಶಾಲೆಗಳಲ್ಲಿ ನಿಗೂಢವಾಗಿ ಸಾಯುವ ದನಗಳ ಸಂಖ್ಯೆ ಹೆಚ್ಚುತ್ತಿದೆ. ಸರಕಾರ ನೀಡಿದ ಅನುದಾನಗಳನ್ನು ಗೋಶಾಲೆಗಳಿಗೆ ಉಪಯೋಗಿಸದೆ ಗೋವುಗಳನ್ನು ಸಾಯಲು ಬಿಟ್ಟು ಅಥವಾ ಅಕ್ರಮವಾಗಿ ಅವುಗಳನ್ನು ಬೃಹತ್ ಕಸಾಯಿ ಖಾನೆಗಳಿಗೆ ಸಾಗಿಸುವ ದಂಧೆ ನಡೆಯುತ್ತಿದೆ ಎಂಬ ಆರೋಪಗಳಿವೆ. ಒಟ್ಟಿನಲ್ಲಿ, ಈ ಕಾನೂನಿಂದ ಬೀಫ್ ತಿನ್ನುವವರು ತಿನ್ನುತ್ತಲೇ ಇದ್ದಾರೆ. ಆದರೆ ಗಂಜಿ ಊಟ ಮಾಡಿ ಬದುಕು ಸಾಗಿಸುತ್ತಿದ್ದ ರೈತರು ಮಾತ್ರ ಹಸಿದು ಕೂರಬೇಕಾದ ಸ್ಥಿತಿ ನಿರ್ಮಾಣವಾಗಿದೆ.







