‘ಅಲೈದೇವ್ರು' ನಾಟಕಕ್ಕೆ ಸಂಘಪರಿವಾರ ಕಾರ್ಯಕರ್ತರಿಂದ ಬೆದರಿಕೆ: ಕ್ರಮಕ್ಕೆ ಒತ್ತಾಯ
ಬೆಂಗಳೂರು, ಜ.31: ಲೇಖಕ ಹನುಮಂತ ಹಾಲಗೇರಿ ನಿರ್ದೇಶನದಲ್ಲಿ ವಿಶ್ವರಂಗ ಥಿಯೇಟರ್ ಪ್ರಸ್ತುತಪಡಿಸುತ್ತಿರುವ ‘ಅಲೈದೇವ್ರು’ ನಾಟಕಕ್ಕೆ ಸಂಘ ಪರಿವಾರದ ಕಾರ್ಯಕರ್ತರು ಬೆದರಿಕೆವೊಡ್ಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಸಾಹಿತ್ಯಾಸಕ್ತರು, ರಂಗಕರ್ಮಿಗಳು ಆಗ್ರಹಿಸಿದ್ದಾರೆ.
ರವಿವಾರ ಇಲ್ಲಿನ ಬಸವೇಶ್ವರ ನಗರದಲ್ಲಿರುವ ಪ್ರಭಾತ್ ಕೆಇಬಿ ರಂಗ ಮಂದಿರದಲ್ಲಿ ನಾಟಕ ಯಶಸ್ವಿಯಾಗಿ ಪ್ರದರ್ಶನವಾಗಿದೆ. ಆದರೆ, ಇದಕ್ಕೂ ಮೊದಲು ನಾಟಕ ಪ್ರದರ್ಶನ ಕುರಿತು ಮಾಹಿತಿ ಹಂಚಿಕೊಳ್ಳುವಾಗ ಕೆಲ ಸಂಘ ಪರಿವಾರದ ಕಾರ್ಯಕರ್ತರು ನಾಟಕದ ಪೋಸ್ಟರ್ ಗಳ ಬಗ್ಗೆ ಅಪಪ್ರಚಾರ ಮಾಡಿದ್ದಲ್ಲದೆ, ಲೇಖಕ ಹನುಮಂತ ಹಾಲಗೇರಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಲಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ನಾಟಕಕಾರರೊಬ್ಬರು, ತಂಡದ 40ಕ್ಕೂ ಹೆಚ್ಚು ಸದಸ್ಯರು ಹಲವು ದಿನಗಳಿಂದ ಈ ನಾಟಕವನ್ನು ಅಭ್ಯಾಸ ಮಾಡಿದ್ದೇವೆ. ಜತೆಗೆ, ಆಸಕ್ತರು ಪಾಲ್ಗೊಳ್ಳುವಂತೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ವೇದಿಕೆಗಳಲ್ಲಿ ಪ್ರಚಾರ ಮಾಡಿದ್ದೇವೆ. ಆದರೆ, ಮೂರು ದಿನಗಳಿಂದ ದೂರವಾಣಿ ಕರೆಗಳ ಮೂಲಕ ಬೆದರಿಕೆ ಹಾಕಿ, ಪ್ರದರ್ಶನ ನಡೆಸದಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಂಬಂಧ ಪೊಲೀಸರಿಗೂ ಮನವಿ ಮಾಡಲಾಗಿದ್ದು, ಸೂಕ್ತ ತನಿಖೆ ನಡೆಸಿ, ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಂಗ ಭೂಮಿ ಕಲಾವಿದರು ಕೋರಿದರು.







