ಪತಿಯನ್ನು ಪತ್ನಿ ಹತ್ಯೆಗೈದರೂ ಪಿಂಚಣಿಗೆ ಅರ್ಹ: ಹೈಕೋರ್ಟ್

ಹೊಸದಿಲ್ಲಿ: ಪತ್ನಿಯು ತನ್ನ ಪತಿಯನ್ನು ಹತ್ಯೆಗೈದರೂ ಕುಟುಂಬ ಪಿಂಚಣಿ ಪಡೆಯಲು ಅಕೆ ಅರ್ಹಳು ಎಂದು ಇತ್ತೀಚೆಗೆ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಅಸಾಮಾನ್ಯ ತೀರ್ಪಿನಲ್ಲಿ ತಿಳಿಸಿದೆ.
ಒಂದು ವೇಳೆ ಪತ್ನಿಯು ತನ್ನ ಗಂಡನನ್ನು ಹತ್ಯೆಗೈದಿದ್ದರೂ ಆಕೆ ಕುಟುಂಬ ಪಿಂಚಣಿಯಿಂದ ವಂಚಿತರಾಗಲು ಸಾಧ್ಯವಿಲ್ಲ.ಕುಟುಂಬ ಪಿಂಚಣಿ ಎನ್ನುವುದು ಒಂದು ಕಲ್ಯಾಣ ಯೋಜನೆಯಾಗಿದ್ದು, ಸರಕಾರಿ ನೌಕರನ ಮರಣದ ಸಂದರ್ಭದಲ್ಲಿ ಆತನ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಲು ಇದನ್ನು ಆರಂಭಿಸಲಾಗಿದೆ. ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರೂ ಸಹ ಪತ್ನಿಯು ಕುಟುಂಬದ ಪಿಂಚಣಿಗೆ ಅರ್ಹಳಾಗಿರುತ್ತಾಳೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬಲ್ಜೀತ್ ಕೌರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ. ತನ್ನ ಪತಿ ತರ್ಸೆಮ್ ಸಿಂಗ್ ಹರ್ಯಾಣ ಸರಕಾರದ ನೌಕರನಾಗಿದ್ದು, 2008ರಲ್ಲಿ ನಿಧನರಾಗಿದ್ದಾರೆ. 2009ರಲ್ಲಿ ನನ್ನ ವಿರುದ್ದ ಕೊಲೆ ಪ್ರಕರಣ ದಾಖಲಾಗಿದ್ದು, 2011ರಲ್ಲಿ ನನ್ನನ್ನು ಅಪರಾಧಿ ಎಂದು ಘೋಷಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಬಲ್ಜೀತ್ ಕೌರ್ 2011ರ ತನಕ ಕುಟುಂಬ ಪಿಂಚಣಿ ಪಡೆಯುತ್ತಿದ್ದರು. ಅಪರಾಧಿ ಎಂದು ಘೋಷಿಸಲ್ಪಟ್ಟ ತಕ್ಷಣ ಹರ್ಯಾಣ ಸರಕಾರವು ಪಿಂಚಣಿಯನ್ನು ನಿಲ್ಲಿಸಿತ್ತು.
ಹರ್ಯಾಣ ಸರಕಾರದ ಆದೇಶವನ್ನು ಬದಿಗಿಟ್ಟ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್, ಎರಡು ತಿಂಗಳಲ್ಲಿ ಬಾಕಿ ಸಹಿತ ಕುಟುಂಬ ಪಿಂಚಣಿಯನ್ನು ಅರ್ಜಿದಾರರಿಗೆ ಸಂಬಂಧಿತ ಇಲಾಖೆ ಬಿಡುಗಡೆ ಮಾಡಬೇಕೆಂದು ನಿರ್ದೇಶನ ನೀಡಿದೆ.
ಪತಿಯ ಮರಣದ ನಂತರ ಪತ್ನಿ ಸಿಸಿಎಸ್ (ಪಿಂಚಣಿ)ನಿಯಮಗಳು, 1972ರ ಅಡಿಯಲ್ಲಿ ಕುಟುಂಬ ಪಿಂಚಣಿಗೆ ಅರ್ಹಳಾಗಿರುತ್ತಾಳೆ.







